ಹಿಂಬಡ್ತಿ ನೌಕರರ ಮರು ನಿಯುಕ್ತಿ : ರಾಜ್ಯ ಸರ್ಕಾರ ಆದೇಶ

0
452

ಸುಪ್ರೀಂ ಕೋರ್ಟ್‌ ತೀರ್ಪಿನ ಪರಿಣಾಮ ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿ (ಎಸ್‌.ಸಿ), ಪರಿಶಿಷ್ಟ ವರ್ಗದ (ಎಸ್‌.ಟಿ) 3,900 ನೌಕರರನ್ನು ಹಿಂಬಡ್ತಿ ಪೂರ್ವದಲ್ಲಿದ್ದ ಹುದ್ದೆಗೆ ಮರು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಫೆಬ್ರುವರಿ 27 ರ ಗುರುವಾರ ಆದೇಶ ಹೊರಡಿಸಿದೆ.

ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪಿನ ಪರಿಣಾಮ ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿ (ಎಸ್‌.ಸಿ), ಪರಿಶಿಷ್ಟ ವರ್ಗದ (ಎಸ್‌.ಟಿ) 3,900 ನೌಕರರನ್ನು ಹಿಂಬಡ್ತಿ ಪೂರ್ವದಲ್ಲಿದ್ದ ಹುದ್ದೆಗೆ ಮರು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ  ಫೆಬ್ರುವರಿ 27 ರ  ಗುರುವಾರ ಆದೇಶ ಹೊರಡಿಸಿದೆ.

ಮರು ನಿಯುಕ್ತಿಗೊಳಿಸಲು ಹುದ್ದೆ ಖಾಲಿ ಇಲ್ಲದಿದ್ದರೆ ಸೂಮರ್‌ ನ್ಯೂಮರರಿ (ಸಂಖ್ಯಾಧಿಕ) ಹುದ್ದೆ ಸೃಜಿಸಬೇಕು. ಅದೇ ವೃಂದದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಯಾವುದೇ ವರ್ಗಕ್ಕೆ ಸೇರಿದ ನೌಕರರಿಗೆ ಹಿಂಬಡ್ತಿ ನೀಡಬಾರದು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

 ಆದೇಶ ಜಾರಿ ಪರಿಣಾಮ

# ಹಿಂಬಡ್ತಿಗೊಳಗಾದವರಿಗೆ ಹಿಂಬಡ್ತಿಗೆ ಒಳಗಾದ ದಿನದಿಂದ 
ಪೂರ್ವಾನ್ವಯವಾಗುವಂತೆ ಅದೇ ಹುದ್ದೆ ಮತ್ತು ವೇತನ

# ಅದೇ ಹುದ್ದೆ ನೀಡಬೇಕೆಂಬ ಕಾರಣಕ್ಕೆ ಸದ್ಯ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಿಂಬಡ್ತಿ ನೀಡುವಂತಿಲ್ಲ. ಅದರ ಬದಲು ಸೂಮರ್‌ ನ್ಯೂಮರರಿ ಹುದ್ದೆ ಸೃಜನೆ

# ಆಯಾ ಇಲಾಖೆಗಳ ಮುಖ್ಯಸ್ಥರು ಹಾಲಿ ಮತ್ತು ಸೂಮರ್‌ ನ್ಯೂಮರರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ನೌಕರಿಗೆ ಕಾರ್ಯಹಂಚಿಕೆ ಮಾಡಬೇಕು

# 1978ರ ಏಪ್ರಿಲ್‌ 27ರಿಂದ ಅನ್ವಯವಾಗುವಂತೆ ಹೊಸ ಕಾಯ್ದೆಯಲ್ಲಿರುವ ಅಂಶಗಳ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿ ಪುನರ್‌ ಅವಲೋಕಿಸಬೇಕು

# ಹೊಸ ಕಾಯ್ದೆಯಲ್ಲಿರುವಂತೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ ಬಳಿಕ ಅದರ ಆಧಾರದಲ್ಲಿ ಮುಂಬಡ್ತಿ ನೀಡಬೇಕು.

# ಈ ಆದೇಶ ಬಡ್ತಿ ಮೀಸಲು ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ

ಆದೇಶದ ವಿರುದ್ಧ ‘ಸುಪ್ರೀಂ’ಗೆ ಇಂದೇ ಮನವಿ

ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸದೇ, ಹಿಂಬಡ್ತಿ ನೀಡಿದವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಶುಕ್ರವಾರ (ಫೆ. 28) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ (ಅಹಿಂಸಾ) ನೌಕರರ ಒಕ್ಕೂಟ ನಿರ್ಧರಿಸಿದೆ.

‘ಬಡ್ತಿ ಮೀಸಲು ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಉಲ್ಲಂಘಿಸಿ ಸರ್ಕಾರ ಈ ಆದೇಶ ಹೊರಡಿಸಿದೆ. ಹೀಗಾಗಿ, ಯಥಾಸ್ಥಿತಿ ಕಾಪಾಡುವಂತೆ ಮಧ್ಯಂತರ ಆದೇಶ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಲಾಗುವುದು’ ಎಂದು ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜು ತಿಳಿಸಿದರು.