ಹಾರ್ದಿಕ್ ಪಟೇಲ್‌ ಚುನಾವಣೆ ಕನಸು ಭಗ್ನ: ಸ್ಪರ್ಧೆಗೆ ಅನರ್ಹಗೊಳಿಸಿದ ಹೈಕೋರ್ಟ್

0
463

ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 2015ರ ಮೆಹ್ಸಾನಾ ಗಲಭೆ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿಸಿದ ತೀರ್ಪಿಗೆ ತಡೆಯೊಡ್ಡುವಂತೆ ಹಾರ್ದಿಕ್ ಪಟೇಲ್ ಕೋರಿಕೆಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.

ಅಹಮದಾಬಾದ್: ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 2015ರ ಮೆಹ್ಸಾನಾ ಗಲಭೆ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿಸಿದ ತೀರ್ಪಿಗೆ ತಡೆಯೊಡ್ಡುವಂತೆ ಹಾರ್ದಿಕ್ ಪಟೇಲ್ ಕೋರಿಕೆಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. 

ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಮಾಜಿ ಸಂಚಾಲಕ ಹಾರ್ದಿಕ್ ಪಟೇಲ್, ಮಾರ್ಚ್ 8ರಂದು ಮೆಹ್ಸಾನಾ ಪ್ರಕರಣದ ತೀರ್ಪಿಗೆ ತಡೆಯೊಡ್ಡುವಂತೆ ಕೋರಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. 

ಗಲಭೆ ಸಂದರ್ಭದಲ್ಲಿ ಪಾಟಿದಾರ್ ನಾಯಕ ಆ ಸ್ಥಳದಲ್ಲಿ ಇರಲಿಲ್ಲ ಎಂದು ಅವರ ವಕೀಲರು ವಾದಿಸಿದ್ದರು. 

ಹೈಕೋರ್ಟ್ ತೀರ್ಪಿನಿಂದಾಗಿ ಹಾರ್ದಿಕ್ ಪಟೇಲ್ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಮೆಹ್ಸಾನಾ ಗಲಭೆ ಪ್ರಕರಣದಲ್ಲಿ ದೋಷಿಯಾಗಿರುವುದರಿಂದ ಹಾರ್ದಿಕ್ ಪಟೇಲ್ ಅನರ್ಹಗೊಂಡಿದ್ದಾರೆ. 

ಹಾರ್ದಿಕ್ ಪಟೇಲ್ ವಿರುದ್ಧ 17 ಎಫ್‌ಐಆರ್‌ಗಳು ಹಾಗೂ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದನ್ನು ಕೋರ್ಟ್ ಉಲ್ಲೇಖಿಸಿದೆ. 

2015ರ ಮೆಹ್ಸಾನಾ ಪ್ರಕರಣದಲ್ಲಿ ಕೆಳಗಿನ ನ್ಯಾಯಾಲಯ ಹಾರ್ದಿಕ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಜೈಲು ಶಿಕ್ಷೆ ಪ್ರಮಾಣವನ್ನು ತಗ್ಗಿಸಿತ್ತು ಹಾಗೂ ಜಾಮೀನು ಮಂಜೂರು ಮಾಡಿತ್ತು. ಆದರೆ ತೀರ್ಪಿಗೆ ತಡೆಯೊಡ್ಡಿರಲಿಲ್ಲ. 

2015ರ ಪಾಟಿದಾರ್ ಹೋರಾಟದ ಸಂದರ್ಭ ಮೆಹ್ಸಾನಾ ಜಿಲ್ಲೆಯ ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಸುಟ್ಟ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ದೋಷಿಯಾಗಿದ್ದಾರೆ. 

ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರಿ, ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದರು.