ಹಾಕಿ:‘ಒಲಿಂಪಿಕ್‌ ಟೆಸ್ಟ್’ ಗೆದ್ದ ಹರ್ಮನ್‌ಪ್ರೀತ್‌ ಪಡೆ

0
9

ಭಾರತ ತಂಡ ಆಗಸ್ಟ್ 21 ರ ಬುಧವಾರ ನಡೆದ ಫೈನಲ್‌ನಲ್ಲಿ 5–0 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿ ಒಲಿಂಪಿಕ್ ಹಾಕಿ ಟೆಸ್ಟ್‌ ಟೂರ್ನಿಯನ್ನು ಗೆದ್ದುಕೊಂಡಿತು.

ಟೋಕಿಯೊ (ಪಿಟಿಐ): ಭಾರತ ತಂಡ ಆಗಸ್ಟ್ 21 ರ  ಬುಧವಾರ ನಡೆದ ಫೈನಲ್‌ನಲ್ಲಿ 5–0 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿ ಒಲಿಂಪಿಕ್ ಹಾಕಿ ಟೆಸ್ಟ್‌ ಟೂರ್ನಿಯನ್ನು ಗೆದ್ದುಕೊಂಡಿತು.

ಈ ಗೆಲುವಿನ ಮೂಲಕ ಭಾರತವು ರೌಂಡ್‌ರಾಬಿನ್‌ ಲೀಗ್‌ ಹಂತದಲ್ಲಿ ಕಿವೀಸ್‌ ಎದುರು ಅನುಭವಿಸಿದ 1–2 ಸೋಲಿಗೆ ಮುಯ್ಯಿ ತೀರಿಸಿಕೊಂಡಿತು. ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ (7ನೇ ನಿಮಿಷ), ಶಂಶೇರ್‌ ಸಿಂಗ್‌ (18ನೇ), ನೀಲಕಂಠ ಶರ್ಮಾ (22ನೇ) ಗುರುಸಾಹಿಬ್‌ಜಿತ್‌ ಸಿಂಗ್‌ (26ನೇ) ಮತ್ತು ಮನ್‌ದೀಪ್‌ ಸಿಂಗ್‌ (27ನೇ) ಗೋಲುಗಳನ್ನು ಗಳಿಸಿದರು.

‘ನಾವು ಉತ್ತಮವಾಗಿ ಆಡಿದೆವು. ಆರಂಭದಿಂದಲೇ ನಮಗೆ ದೊರೆತ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದೆವು’ ಎಂದು ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ತಂಡದ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.

‘ನಾವು ಈ ಮೊದಲು ನ್ಯೂಜಿಲೆಂಡ್‌ ಎದುರು ಸೋತಿದ್ದೆವು. ನಂತರ ನಮಗೆ ಅಭ್ಯಾಸ ನಡೆಸಲು ಸಮಯವಿತ್ತು. ನಮ್ಮ ತಪ್ಪುಗಳನ್ನು ಕಂಡುಕೊಂಡು ಫೈನಲ್‌ನಲ್ಲಿ ಸರಿಪಡಿಸಿದೆವು’ ಎಂದು ಹೇಳಿದರು.

ಎರಡೂ ತಂಡಗಳ ಆರಂಭ ಎಚ್ಚರಿಕೆಯಿಂದ ಕೂಡಿದ್ದು, ಆಟ ಮಿಡ್‌ಫೀಲ್ಡ್‌ ಕ್ಷೇತ್ರಕ್ಕೆ ಸೀಮಿತಗೊಂಡಿತು. ಏಳನೇ ನಿಮಿಷ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶ ದೊರೆಯಿತು. ಆದರೆ ಆ ಅವಕಾಶ ವ್ಯರ್ಥವಾಯಿತು. ಮತ್ತೊಮ್ಮೆ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್‌ ಎಡವಲಿಲ್ಲ. ಪರಿಪೂರ್ಣ ‘ಡ್ರ್ಯಾಗ್‌ಫ್ಲಿಕ್‌’ನೊಡನೆ ಅವರು ಭಾರತಕ್ಕೆ ಮುನ್ನಡೆ ಒದಗಿಸಿದರು. ಚೆಂಡು ನಂತರವೂ ಭಾರತದ ಆಟಗಾರರ ನಿಯಂತ್ರಣದಲ್ಲಿದ್ದು, ಕಿವೀಸ್‌ ತಂಡದ ಮೇಲೆ ಒತ್ತಡ ಮುಂದುವರಿಯಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ 1–0 ಮುನ್ನಡೆಯಲ್ಲಿತ್ತು.

ಪಂದ್ಯದ 18ನೇ ನಿಮಿಷ ಶಂಶೇರ್‌ ತಂಡದ ಎರಡನೇ ಗೋಲನ್ನು ‘ಪೆನಾಲ್ಟಿ ಕಾರ್ನರ್‌’ ಮೂಲಕ ಗಳಿಸಿದರು.
 
ಎರಡನೇ ಕ್ವಾರ್ಟರ್‌ನಲ್ಲಿ ನ್ಯೂಜಿಲೆಂಡ್‌ಗೆ ಭಾರತ ಗೋಲಿನ ಬಳಿ ಸಾಗಲು ಸಾಧ್ಯವಾಗಿದ್ದು ಬರೇ ಎರಡು ಬಾರಿ ಮಾತ್ರ. ಇನ್ನೊಂದು ಕಡೆ  ಭಾರತ ಮತ್ತೆರಡು ಗೋಲುಗಳನ್ನು ಗಳಿಸಿತು. ನೀಲಕಂಠ ಶರ್ಮಾ 22ನೇ ನಿಮಿಷ ಅಂತರ ಹೆಚ್ಚಿಸಿದರು. ಗುರುಸಾಹಿಬ್‌ಜಿತ್‌  ಮತ್ತು ಮನದೀಪ್‌ ಅಲ್ಪ ಅಂತರದಲ್ಲಿ ಗೋಲುಗಳನ್ನು ಗಳಿಸಿ ಭಾರತಕ್ಕೆ ಪೂರ್ಣ ಮೇಲುಗೈ ದೊರಕಿಸಿದರು
 
ವಿವೇಕ್‌ ಪ್ರಸಾದ್‌ ಅವರ ಉತ್ತಮ ಪಾಸ್‌, ಗುರುಸಾಹಿಬ್‌ಗೆ ಗೋಲು ಗಳಿಸಿಲು ನೆರವಾಯಿತು. ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲು ಮನದೀಪ್‌ ಪೆನಾಲ್ಟಿ ಕಾರ್ನರ್‌ಅನ್ನು ಗೋಲಾಗಿ ಪರಿವರ್ತಿಸಿದರು.
 
ಎರಡನೇ ಅವಧಿಯಲ್ಲಿ ಆಟದ ಬಿರುಸು ಕೊಂಚ ತಗ್ಗಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ನ್ಯೂಜಿಲೆಂಡ್‌ ಕೆಲವು ದಾಳಿ ನಡೆಸುವಲ್ಲಿ ಯಶಸ್ವಿಯಾಯಿತು. 37ನೇ ನಿಮಿಷ ಇಂಥ ಒಂದು ಯತ್ನದಲ್ಲಿ ಚೆಂಡು ಭಾರತದ ಗೋಲುಪೆಟ್ಟಿಗೆಯ ಆಚೆಯಿಂದ ಹೋಯಿತು.
 
ಮರುನಿಮಿಷದಲ್ಲೇ ಎದುರಾಳಿಯ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಭಾರತದವರು ಉತ್ತಮವಾಗಿ ತಡೆದರು.
 
ಒಲಿಂಪಿಕ್ ಹಾಕಿ ಟೆಸ್ಟ್‌ ಗೆದ್ದ ಭಾರತ ಮಹಿಳಾ ಹಾಕಿ ತಂಡ
 
ನವಜೋತ್‌ ಕೌರ್‌ ಹಾಗೂ ಲಾಲ್‌ರೆಮ್ಸಿಯಾಮಿ ಅವರ ಅಮೋಘ ಗೋಲುಗಳ ಬಲದಿಂದ ಭಾರತ ಮಹಿಳಾ ಹಾಕಿ ತಂಡವು ಒಲಿಂಪಿಕ್‌ ಟೆಸ್ಟ್‌ ಫೈನಲ್‌ನಲ್ಲಿ ಜಯ ಕಂಡಿತು. ಅಂತಿಮ ಪಂದ್ಯದಲ್ಲಿ ಆತಿಥೇಯ ಜಪಾನ್‌ ತಂಡವನ್ನು 2–1ರಿಂದ ರಾಣಿ ರಾಂಪಾಲ್‌ ಪಡೆ ಮಣಿಸಿತು.
 
ನವಜೋತ್‌ ಕೌರ್‌ (11ನೇ ನಿಮಿಷ) ಮೊದಲ ಗೋಲು ಬಾರಿಸಿ ಭಾರತದ ಮುನ್ನಡೆಗೆ ಕಾರಣವಾದರು. ಜಪಾನ್‌ ತಂಡದ ಮಿನಾಮಿ ಶಿಮಿಜು (12ನೇ ನಿಮಿಷ) ಯಶಸ್ಸು ಸಾಧಿಸಿ ಸಮಬಲಕ್ಕೆ ತಂದರು. ಲಾಲ್‌ ರೆಮ್ಸಿಯಾಮಿ ಗೆಲುವಿನ ಗೋಲು ಬಾರಿಸಿ ಭಾರತದ ಸಂಭ್ರಮಕ್ಕೆ ಕಾರಣವಾದರು.