ಹಾಂಗ್‌ಕಾಂಗ್‌ : ಹಸ್ತಾಂತರ ಮಸೂದೆ ವಾಪಸ್‌

0
6

ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಹಸ್ತಾಂತರ ಮಸೂದೆಯನ್ನು ಹಾಂಗ್‌ಕಾಂಗ್‌ ಆಡಳಿತ ಹಿಂತೆಗೆದುಕೊಂಡಿರುವುದಾಗಿ ಬುಧವಾರ ಘೋಷಿಸಿದೆ.

ಹಾಂಗ್‌ಕಾಂಗ್‌ (ಎಪಿ): ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಹಸ್ತಾಂತರ ಮಸೂದೆಯನ್ನು ಹಾಂಗ್‌ಕಾಂಗ್‌ ಆಡಳಿತ ಹಿಂತೆಗೆದುಕೊಂಡಿರುವುದಾಗಿ ಅಕ್ಟೋಬರ್ 23 ರ ಬುಧವಾರ ಘೋಷಿಸಿದೆ.

ಶಂಕಿತ ಅಪರಾಧಿಗಳನ್ನುವಿಚಾರಣೆಗಾಗಿ ಚೀನಾಗೆ ಹಸ್ತಾಂತರಿಸುವ ಮಸೂದೆ ಜಾರಿಗೆ ಆಡಳಿತ ಮುಂದಾಗಿತ್ತು. ಇದಕ್ಕೆ ಹಾಂಗ್‌ಕಾಂಗ್‌ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಂಗ್‌ಕಾಂಗ್‌ನಾದ್ಯಂತ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಗಳನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

‘ಹಸ್ತಾಂತರ ಮಸೂದೆ ಹಿಂಪಡೆಯಲಾಗಿದೆ’ ಎಂದು ರಕ್ಷಣಾ ಕಾರ್ಯದರ್ಶಿಜಾನ್‌ ಲೀ ಪ್ರಕಟಿಸಿದರು. ಪ್ರಜಾಪ್ರಭುತ್ವಪರ ಶಾಸಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಈ ಕುರಿತು ಚರ್ಚೆಗೆ ಅನುಮತಿ ಇಲ್ಲ’ ಎಂದು ಹೇಳಿದರು.

ಚಾನ್‌ ಟಾಂಗ್‌–ಕೈ ಬಿಡುಗಡೆ

ಹಾಂಗ್‌ಕಾಂಗ್‌ನಲ್ಲಿ ‘ಹಸ್ತಾಂತರ ಮಸೂದೆ’ ವಿರೋಧಿಸಿ ನಿರಂತರ ಪ್ರತಿಭಟನೆಗಳಿಗೆ ಪರೋಕ್ಷವಾಗಿ ಕಾರಣಕರ್ತನಾಗಿದ್ದ ಕೊಲೆ ಆರೋಪಿ ಚಾನ್‌ ಟಾಂಗ್‌–ಕೈ ಅನ್ನು ಬುಧವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ತೈವಾನ್‌ ನಿವಾಸಿಯಾದ ಚಾನ್‌ ಟಾಂಗ್‌ ಕೈ ಕಳೆದ ವರ್ಷ ಹಾಂಗ್‌ಕಾಂಗ್‌ಗೆ ಬರುವುದಕ್ಕೂ ಮುನ್ನ ತನ್ನ ಗೆಳತಿಯನ್ನು (ಗರ್ಭಿಣಿ) ಕೊಂದಿರುವ ಆರೋಪವಿದೆ. ಆರೋಪಿಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹಾಂಗ್‌ಕಾಂಗ್‌ ಮತ್ತು ತೈವಾನ್‌ ನಡುವೆ ಹಸ್ತಾಂತರ ಒಪ್ಪಂದ ಇರಲಿಲ್ಲ. ಹಸ್ತಾಂತರ ಮಸೂದೆ ಪ್ರಸ್ತಾಪವನ್ನು ಸರ್ಕಾರ ಮಾಡಿದಾಗ, ತೀವ್ರ ವಿರೋಧ ವ್ಯಕ್ತವಾಗಿತ್ತು.