ಹವಾಮಾನ ಬದಲಾವಣೆ ನೀರು ಪೂರೈಕೆ ಕ್ಷೀಣ ನ್ಯೂಸೌತ್‌ ವೇಲ್ಸ್‌ ವಿಶ್ವವಿದ್ಯಾಲಯದ ಸಂಶೋಧಕರ ವರದಿ

0
450

ಹವಾಮಾನದಲ್ಲಾಗುತ್ತಿರುವ ತೀವ್ರತರ ಬದಲಾವಣೆಯು ಜಗತ್ತಿನಲ್ಲಿ ನೀರಿನ ಕೊರತೆಗೆ ಕಾರಣವಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ, ಆ ನೀರು ಜನ ಬಳಕೆಗೆ ದಕ್ಕುತ್ತಿಲ್ಲ. ಇದು ಹೀಗೇ ಮುಂದುವರಿದರೆ ವಿಶ್ವದಲ್ಲಿ ಬರ ಪರಿಸ್ಥಿತಿ ಎನ್ನುವುದು ಸಾಮಾನ್ಯ ಎನ್ನುವಂತಾಗುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.

ಮೆಲ್ಬೋರ್ನ್‌ (ಪಿಟಿಐ): ಹವಾಮಾನದಲ್ಲಾಗುತ್ತಿರುವ ತೀವ್ರತರ ಬದಲಾವಣೆಯು ಜಗತ್ತಿನಲ್ಲಿ ನೀರಿನ ಕೊರತೆಗೆ ಕಾರಣವಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ, ಆ ನೀರು ಜನ ಬಳಕೆಗೆ ದಕ್ಕುತ್ತಿಲ್ಲ. ಇದು ಹೀಗೇ ಮುಂದುವರಿದರೆ ವಿಶ್ವದಲ್ಲಿ ಬರ ಪರಿಸ್ಥಿತಿ ಎನ್ನುವುದು ಸಾಮಾನ್ಯ ಎನ್ನುವಂತಾಗುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.

ಆಸ್ಟ್ರೇಲಿಯಾದ ನ್ಯೂಸೌತ್‌ ವೇಲ್ಸ್‌ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ‘ಜಗತ್ತಿನ ಎಲ್ಲೆಡೆ ಹೆಚ್ಚು ಮಳೆಯಾಗುತ್ತಿದ್ದರೂ, ವಾತಾವರಣದಲ್ಲಿ ಬಿಸಿ ಗಾಳಿ ಹಾಗೂ ಮಣ್ಣಿನ ಸವಕಳಿ ಪ್ರಮಾಣ ಹೆಚ್ಚುತ್ತಿರುವುದರಿಂದ ಮತ್ತು ಭೂಮಿ ಒಣಗುತ್ತಿರುವುದರಿಂದ ಬೃಹತ್‌ ನದಿಗಳೂ ಬರಿದಾಗುತ್ತಿವೆ’ ಎಂದು ಸಂಶೋಧಕ ಆಶಿಶ್‌ ಶರ್ಮಾ ಹೇಳುತ್ತಾರೆ. 

‘ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದರೆ, ನಮ್ಮ ನಗರಗಳು ಹಾಗೂ ಕೃಷಿಭೂಮಿಗೆ ನೀರಿನ ಕೊರತೆ ಎದುರಾಗುತ್ತದೆ ಎಂದೇ ಅರ್ಥ. ಭೂಮಿ ಒಣಗುತ್ತಿರುವುದರಿಂದ ರೈತರು ಬೆಳೆ ಬೆಳೆಯಲು ಮೊದಲಿಗಿಂತ ಹೆಚ್ಚು ನೀರು ಬಳಸಬೇಕಾಗುತ್ತದೆ. ಜಗತ್ತಿನೆಲ್ಲೆಡೆ ಇದೇ ಪರಿಸ್ಥಿತಿ ಮುಂದುವರಿದರೆ ಗಂಭೀರ ಪರಿಣಾಮವನ್ನು ಜನ ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಎಷ್ಟೇ ಮಳೆ ಬಿದ್ದರೂ, ಒಣಗುತ್ತಿರುವ ಭೂಮಿಯು ಅದನ್ನು ಹೀರಿಕೊಳ್ಳುತ್ತಿದೆ. ಹೀಗಾಗಿ, ಮಾನವ ಬಳಕೆಗೆ ಅತಿ ಕಡಿಮೆ ನೀರು ಸಿಗುತ್ತಿದೆ’ ಎಂದು ಶರ್ಮಾ ಹೇಳಿದ್ದಾರೆ. 

ಭೂಮಿಗೆ ಬೀಳುವ ಪ್ರತಿ 100 ಮಳೆಹನಿಗಳಲ್ಲಿ ಕೆರೆ,ನದಿಗಳನ್ನು ಸೇರುವುದು 36 ಹನಿಗಳು ಮಾತ್ರ. ಮನುಷ್ಯ ತನ್ನ ಬಳಕೆಗೆ ಇದನ್ನೇ ಆಶ್ರಯಿಸಬೇಕು.
            – ಆಶಿಶ್‌ ಶರ್ಮಾ ಸಂಶೋಧಕ