ಹಫೀಸ್​ ಸಯೀದ್​ನ ಜೆಯುಡಿ ಉಗ್ರ ಸಂಘಟನೆಯನ್ನು ನಿಷೇಧಿಸಿದ ಪಾಕ್​

0
535

ಮುಂಬೈ ದಾಳಿಯ ಮಾಸ್ಟರ್​ಮೈಂಡ್​ ಉಗ್ರ ಹಫೀಸ್​ ಸಯೀದ್​ನ ಜಮಾತ್​ ಉದ್​ ದವಾ ಉಗ್ರ ಸಂಘಟನೆ ಮತ್ತು ಆತನ ಫಲಾಹ್​ ಎ ಇನ್ಸಾನಿಯತ್​ ಫೌಂಡೇಷನ್​ ಅನ್ನು ನಿಷೇಧಿಸಿ ಪಾಕ್​ ಸರ್ಕಾರ ಫೆಬ್ರುವರಿ 21 ರ ಗುರುವಾರ ಆದೇಶಿಸಿದೆ.

ಇಸ್ಲಾಮಾಬಾದ್​: ಮುಂಬೈ ದಾಳಿಯ ಮಾಸ್ಟರ್​ಮೈಂಡ್​ ಉಗ್ರ ಹಫೀಸ್​ ಸಯೀದ್​ನ ಜಮಾತ್​ ಉದ್​ ದವಾ ಉಗ್ರ ಸಂಘಟನೆ ಮತ್ತು ಆತನ ಫಲಾಹ್​ ಎ ಇನ್ಸಾನಿಯತ್​ ಫೌಂಡೇಷನ್​ ಅನ್ನು ನಿಷೇಧಿಸಿ ಪಾಕ್​ ಸರ್ಕಾರ  ಫೆಬ್ರುವರಿ 21 ರ ಗುರುವಾರ ಆದೇಶಿಸಿದೆ.

ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ಬಾಂಬ್​ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹಾಕಲು ಕಾರ್ಯತಂತ್ರ ಹೆಣೆದಿತ್ತು. ಅದರಂತೆ ಹಲವು ರಾಷ್ಟ್ರಗಳು ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪಾಕ್​ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದಲ್ಲಿ ಇಂದು ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಜಮಾತ್​ ಉದ್​ ದವಾ ಮತ್ತು ಫಲಾಹ್​ ಎ ಇನ್ಸಾನಿಯತ್​ ಸಂಘಟನೆಗಳನ್ನು ಆಂತರಿಕ ಸಚಿವಾಲಯ ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಜಮಾತ್​ ಉದ್​ ದವಾ ಪಾಕಿಸ್ತಾನದಲ್ಲಿ 300 ಮದರಸಾಗಳನ್ನು ಹೊಂದಿದೆ. ಜತೆಗೆ ಶಾಲೆಗಳು, ಆಸ್ಪತ್ರೆಗಳು, ಪಬ್ಲಿಕೇಷನ್​ ಹೌಸ್​ಗಳು ಮತ್ತು ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಈ ಎರಡೂ ಸಂಘಟನೆಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಡಿ. 2008ರಲ್ಲಿ ಹಫೀಸ್​ ಸಯೀದ್​ನನ್ನು ಉಗ್ರರ ಪಟ್ಟಿಗೆ ಸೇರಿಸಿತ್ತು. ಆ ನಂತರ ಆತನನ್ನು ಬಂಧಿಸಲಾಗಿತ್ತು. 2017ರ ನವೆಂಬರ್​ನಲ್ಲಿ ಈತನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್​)