ಹತಾಶ ಪಾಕಿಸ್ತಾನ ಸೇಡಿನ ನಡೆ: ಭಾರತದ ರಾಯಭಾರಿ ಉಚ್ಚಾಟನೆ ಸೇರಿ ಪಾಕ್​ನಿಂದ ಐದು ಕ್ರಮ

0
86

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿ ಒಂದು ದೇಶ ಒಂದು ಸಂವಿಧಾನದ ಆಶಯ ಸಾಕಾರಗೊಳಿಸಿದ ಭಾರತ ಸರ್ಕಾರದ ದಿಟ್ಟ ನಿರ್ಧಾರದ ಬಳಿಕ ಕಂಗಾಲಾಗಿರುವ ಪಾಕಿಸ್ತಾನ ಭಾರತದ ರಾಯಭಾರಿ ಉಚ್ಚಾಟನೆ ಸೇರಿದಂತೆ ಐದು ಹತಾಶ ಕ್ರಮಗಳಿಗೆ ಮುಂದಾಗಿದೆ.

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿ ಒಂದು ದೇಶ ಒಂದು ಸಂವಿಧಾನದ ಆಶಯ ಸಾಕಾರಗೊಳಿಸಿದ ಭಾರತ ಸರ್ಕಾರದ ದಿಟ್ಟ ನಿರ್ಧಾರದ ಬಳಿಕ ಕಂಗಾಲಾಗಿರುವ ಪಾಕಿಸ್ತಾನ ಭಾರತದ ರಾಯಭಾರಿ ಉಚ್ಚಾಟನೆ ಸೇರಿದಂತೆ ಐದು ಹತಾಶ ಕ್ರಮಗಳಿಗೆ ಮುಂದಾಗಿದೆ.

ಆಗಸ್ಟ್ 7 ರ ಬುಧವಾರ ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಯಭಾರಿಗೆ ಸ್ವದೇಶಕ್ಕೆ ತೆರಳುವಂತೆ ಸೂಚಿಸಿದೆ. ಜತೆಗೆ ಭಾರತದೊಂದಿಗಿನ ಸಂಬಂಧವನ್ನು ತಗ್ಗಿಸಲು ಹಾಗೂ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸಲು ತೀರ್ವನಿಸಿರುವುದಾಗಿ ತಿಳಿದುಬಂದಿದೆ. ಬುಧವಾರ ರಾಷ್ಟ್ರೀಯ ಭದ್ರತಾ ಸಮಿತಿ ಜತೆ ಸಭೆ ನಡೆಸಿದ ಬಳಿಕ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ಈ ಐದು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಸದ್ಯ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಇಸ್ಲಾಮಾಬಾದ್​ನಲ್ಲೇ ಇದ್ದಾರೆ. ಭಾರತದಲ್ಲಿನ ಪಾಕ್ ರಾಯಭಾರಿ ಮೊಯಿನ್-ಉಲ್ ಹಕ್ ಇನ್ನೂ ಅಧಿಕಾರ ಸ್ವೀಕರಿಸಿಲ್ಲ.

ಪ್ರತೀಕಾರದ ಬೆದರಿಕೆ: ಪಿಒಕೆ ಕೂಡ ಭಾರತದ ಅವಿಭಾಜ್ಯ ಅಂಗ ಎಂಬ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್ ಅಧಿವೇಶನದಲ್ಲೇ ತಿರುಗೇಟು ನೀಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಮುಂದಡಿ ಇಟ್ಟಲ್ಲಿ ನಾವು ತಕ್ಕ ಪಾಠ ಕಲಿಸುತ್ತೇವೆ’ ಎಂದಿದ್ದಾರೆ. ನೆರೆಯ ರಾಷ್ಟ್ರ ಚೀನಾ ಕೂಡ ಭಾರತದ ನಿರ್ಧಾರವನ್ನು ವಿರೋಧಿಸಿದೆ. ಭಾರತ ಏಕಪಕ್ಷೀಯವಾಗಿ ಕಾಶ್ಮೀರದಲ್ಲಿನ ಸ್ಥಿತಿಯನ್ನು ಬದಲಾಯಿಸುವುದನ್ನು ತಪ್ಪಿಸಬೇಕು ಎಂದು ಎಚ್ಚರಿಸಿದ್ದ ಚೀನಾ, ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ್ದರಿಂದ ಆಕ್ರೋಶಗೊಂಡಿದೆ. ಇದಕ್ಕೆ ಭಾರತ ಕೂಡ ತಿರುಗೇಟು ನೀಡಿದೆ. ಇದು ನಮ್ಮ ದೇಶದ ಭೂಪ್ರದೇಶಕ್ಕೆ ಸಂಬಂಧಿಸಿದ ಆಂತರಿಕ ವಿಷಯ. ಭಾರತ ಬೇರೆ ದೇಶಗಳ ಆಂತರಿಕ ವಿಚಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಇತರ ದೇಶಗಳು ನಮ್ಮ ವಿಷಯದಲ್ಲೂ ಇದೇ ರೀತಿ ಇರಬೇಕೆಂದು ನಿರೀಕ್ಷಿಸುತ್ತದೆ ಎಂದು ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

ಪಾಕ್​ನ 5 ನಿರ್ಧಾರಗಳು

1 – ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಕೊನೆಗೊಳಿಸುವುದು

2 – ಭಾರತದ ಜತೆಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಸ್ಥಗಿತಗೊಳಿಸುವುದು

3 – ದ್ವಿಪಕ್ಷೀಯ ಒಪ್ಪಂದಗಳ ಮರುಪರಿಶೀಲನೆ ನಡೆಸುವುದು

4 – ವಿಷಯವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುವುದು

5 – ಆ.14ರ ಪಾಕ್ ಸ್ವಾತಂತ್ರ್ಯ ದಿನವನ್ನು ಕಾಶ್ಮೀರಿಗಳಿಗೆ ಬೆಂಬಲ ನೀಡುವ ದಿನವನ್ನಾಗಿ ಆಚರಿಸುವುದು