‘ಸ್ವಚ್ಛ ಹೇ ಸೇವಾ’: ಹದಿನೈದು ದಿನಗಳ ಅಭಿಯಾನ

0
70

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಯ ಸಾಧನೆಗಳನ್ನು ಜನರಿಗೆ ತಿಳಿಸುವುದಕ್ಕಾಗಿ ‘ಸ್ವಚ್ಛ ಹೇ ಸೇವಾ’ (ಸ್ವಚ್ಛತೆ ಎಂಬುದು ಸೇವೆ) ಎಂಬ ಹದಿನೈದು ದಿನಗಳ ಅಭಿಯಾನ ಶುಕ್ರವಾರದಿಂದ ಆರಂಭವಾಗಲಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಯ ಸಾಧನೆಗಳನ್ನು ಜನರಿಗೆ ತಿಳಿಸುವುದಕ್ಕಾಗಿ ‘ಸ್ವಚ್ಛ ಹೇ ಸೇವಾ’ (ಸ್ವಚ್ಛತೆ ಎಂಬುದು ಸೇವೆ) ಎಂಬ ಹದಿನೈದು ದಿನಗಳ ಅಭಿಯಾನ ಶುಕ್ರವಾರದಿಂದ ಆರಂಭವಾಗಲಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕಾನ್ಪುರದ ಈಶ್ವರಿಗಂಜ್‌ ಗ್ರಾಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ಜನಾಂದೋಲನ ರೂಪಿಸಬೇಕಾದ ಅಗತ್ಯವನ್ನು ಪುನರುಚ್ಚರಿಸುವುದು ಇದರ ಮುಖ್ಯ ಉದ್ದೇಶ. ಜನರನ್ನು ಒಟ್ಟು ಸೇರಿಸಿ ಶ್ರಮದಾನದ ಮೂಲಕ ಸ್ವಚ್ಛತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕುಡಿಯುವ ನೀರು ಮತ್ತು ನೈರ್ಮಲ ಸಚಿವಾಲಯದ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

‘ನೈರ್ಮಲ್ಯವು ಹಲವು ವಿಚಾರಗಳೊಂದಿಗೆ ತಳಕು ಹಾಕಿಕೊಂಡಿದೆ. ಆರೋಗ್ಯ, ಮಹಿಳೆಯರ ಸುರಕ್ಷತೆ ಮತ್ತು ಘನತೆ ಜತೆಗೆ ದೇಶದ ಆರ್ಥಿಕತೆಯ ಮೇಲೆಯೂ ನೈರ್ಮಲ್ಯ ಪ್ರಭಾವ ಬೀರುತ್ತದೆ. ನೈರ್ಮಲ್ಯವನ್ನು ಉತ್ತಮವಾಗಿ ಕಾಪಾಡಿಕೊಂಡರೆ ಒಂದು ಕುಟುಂಬವು ವರ್ಷಕ್ಕೆ ₹50 ಸಾವಿರದ ವರೆಗೆ ಉಳಿತಾಯ ಮಾಡಬಹುದು ಎಂದು ಯುನಿಸೆಫ್‌ ತಿಳಿಸಿದೆ’ ಎಂದು ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್‌ ಅಯ್ಯರ್‌ ಹೇಳಿದ್ದಾರೆ.

ಆಂದೋಲನದಲ್ಲಿ ಎಲ್ಲ ವಲಯಗಳ ಜನರು ಭಾಗಿಯಾಗಲಿದ್ದಾರೆ. ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಸಂಸದರು, ಎನ್‌ಜಿಒ ಪ್ರತಿನಿಧಿಗಳು ಶ್ರಮದಾನದಲ್ಲಿ ಭಾಗವಹಿಸಲಿದ್ದಾರೆ. ದೇಶವನ್ನು ಬಯಲು ಶೌಚ ಮುಕ್ತ ಮಾಡುವುದಕ್ಕಾಗಿ ಶ್ರಮದಾನದ ಮೂಲಕ ಶೌಚಾಲಯ ಕಟ್ಟಲಾಗುವುದು. ಸಾರ್ವಜನಿಕ ಶೌಚಾಲಯಗಳನ್ನು ಮತ್ತು ಪ್ರವಾಸಿ ತಾಣಗಳನ್ನು ಸ್ವಚ್ಛಗೊಳಿಸುವುದು ಕೂಡ ಆಂದೋಲನದ ಭಾಗವಾಗಿದೆ.

ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸುಸ್ಥಿರ ನೈರ್ಮಲ್ಯ ಸೇವೆಗಳನ್ನು ಒದಗಿಸುವುದಕ್ಕಾಗಿ ಸಚಿವಾಲಯವು ರಾಜ್ಯ ಸರ್ಕಾರಗಳ ಜತೆ ಸೇರಿ ವಿಸ್ತೃತವಾದ ಯೋಜನೆಗಳನ್ನು ರೂಪಿಸಿದೆ.

 

ಅಭಿಯಾನದ ವಿಶೇಷ ದಿನಗಳು

ಸೆ. 17: ಶ್ರಮದಾನ, ಶೌಚಾಲಯಗಳ ನಿರ್ಮಾಣ ಮತ್ತು ಸ್ವಚ್ಛತೆ

ಸೆ. 24: ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಸಂಸ್ಥೆ ಮಟ್ಟದಲ್ಲಿ ಶ್ರಮದಾನ

ಸೆ. 25: ಸಾರ್ವಜನಿಕ ಸ್ಥಳಗಳು, ಬಸ್‌ ನಿಲ್ದಾಣಗಳು, ಆಸ್ಪತ್ರೆಗಳ ಸ್ವಚ್ಛತೆ

ಸೆ. 17: ದೂರದರ್ಶನದಲ್ಲಿ ‘ಟಾಯ್ಲೆಟ್‌: ಏಕ್‌ ಪ್ರೇಮ್‌ಕಥಾ‘ ಸಿನಿಮಾ ಪ್ರದರ್ಶನ (ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ)

ಅ. 1: ಆಯ್ದ 15 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ

ಅ. 2: ಗಾಂಧಿ ಜಯಂತಿಯಂದು (ಅಂದು ಸ್ವಚ್ಛ ಭಾರತ ದಿನ) ಪ್ರಬಂಧ, ಕಿರು ಚಿತ್ರ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ