ಸ್ಟೆಫಾನೊಸ್‌ ಸಿಸಿಪಸ್ ಗೆ ಎಟಿಪಿ ಫೈನಲ್ಸ್ ಗರಿ

0
7

ಸೆಟ್‌ ಹಿನ್ನಡೆಯಿಂದ ಚೇತರಿಸಿಕೊಂಡ ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು ಸೋಲಿಸಿ
ನವೆಂಬರ್ 17 ರ ಭಾನುವಾರ ಎಟಿಪಿ ಫೈನಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಲಂಡನ್‌ (ಎಎಫ್‌ಪಿ): ಸೆಟ್‌ ಹಿನ್ನಡೆಯಿಂದ ಚೇತರಿಸಿಕೊಂಡ ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು ಸೋಲಿಸಿ ನವೆಂಬರ್ 17 ರ ಭಾನುವಾರ ಎಟಿಪಿ ಫೈನಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಹೊಸ ಪೀಳಿಗೆಯ ಆಟಗಾರರಲ್ಲಿ ಸೂಪರ್‌ಸ್ಟಾರ್‌ ಪ‍ಟ್ಟಕ್ಕೇರುವ ಸಾಮರ್ಥ್ಯವನ್ನೂ ಪ್ರಚುರಪಡಿಸಿದರು.

21 ವರ್ಷದ ಸಿಸಿಪಸ್‌ 6–7 (6/8), 6–2, 7–6 (7‌/4) ರಿಂದ ಗೆಲ್ಲುವ ಮೂಲಕ, ಆಸ್ಟ್ರೇಲಿಯಾದ ಲೀಟನ್‌ ಹೆವಿಟ್‌ ನಂತರ (2001) ನಂತರ ಈ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಸಿಸಿಪಸ್‌, ಮೊದಲ ಪ್ರಯತ್ನದಲ್ಲೇ ಈ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರ ಕೂಡ.

ಈ ಮುನ್ನ 2016 ರಲ್ಲಿ ಆಂಡಿ ಮುರ್ರೆ, 2017 ರಲ್ಲಿ ಗ್ರೆಗರ್ ಡಿಮಿಟ್ರೋವ್ ಮತ್ತು ಕಳೆದ ವರ್ಷ 2018 ರಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರುಗಳಿಗೆ ಚೊಚ್ಚಲ ಚಾಂಪಿಯನ್ ಪಟ್ಟ ಲಭಿಸಿತ್ತು.

ಇದು ಆರನೇ ಶ್ರೇಯಾಂಕ ಪಡೆದಿದ್ದ ಗ್ರೀಕ್‌ ಟೆನಿಸಿಗನಿಗೆ ಈ ವರ್ಷದ ಮೂರನೇ ಪ್ರಶಸ್ತಿಯಾಗಿದೆ. ಇಟಲಿಯ ಮಿಲಾನ್‌ನಲ್ಲಿ ನೆಕ್ಟ್ಸ್‌ ಜೆನ್‌ ಎಟಿಪಿ ಫೈನಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ವರುಷದ ಬಳಿಕ ಸಿಸಿಪಸ್‌ ಈ ಸಾಧನೆಗೆ ಪಾತ್ರರಾಗಿದ್ದಾರೆ. ಫೈನಲ್‌ ಹಾದಿಯಲ್ಲಿ ಮೊದಲು ಅವರು ಆರು ಬಾರಿಯ ಚಾಂಪಿಯನ್‌ ರೋಜರ್‌ ಫೆಡರರ್‌ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದ್ದರು.‌

ಈ ವರ್ಷ ಇಂಡಿಯನ್‌ ವೆಲ್ಸ್‌ ಮಾಸ್ಟರ್ಸ್‌ ಸೇರಿ ಐದು ಪ್ರಶಸ್ತಿ ಗೆದ್ದಿರುವ ಥೀಮ್‌, ಸತತ ಎರಡನೇ ಬಾರಿ ಫ್ರೆಂಚ್‌ ಓಪನ್‌ ಫೈನಲ್‌ ಕೂಡ ತಲುಪಿದ್ದರು. ಈ ಸೋಲು ಅವರಿಗೆ ಸಹಜವಾಗಿ ನಿರಾಸೆ ಮೂಡಿಸಿತು.ಇಬ್ಬರೂ ಈ ಟೂರ್ನಿಯಲ್ಲಿ ಸರ್ವ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಫೈನಲ್‌ ತಲುಪುವ ಮೊದಲು ಸಿಸಿಪಸ್‌ 47 ಸರ್ವಿಸ್‌ ಗೇಮ್‌ಗಳಲ್ಲಿ 44 ಅನ್ನು ಗೆದ್ದುಕೊಂಡಿದ್ದರು. 

ಕಳೆದ 15 ವರ್ಷಗಳಿಂದ ಟೆನಿಸ್‌ ರಂಗವನ್ನು ಆಳುತ್ತಿರುವ ದಿಗ್ಗಜರಾದ ಫೆಡರರ್‌, ನೊವಾಕ್‌ ಜೊಕೊವಿಚ್‌ ಮತ್ತು ರಫೆಲ್‌ ನಡಾಲ್‌ ಅವರಿಗೆ ಸವಾಲೊಡ್ಡುವ ಹೊಸ ಪೀಳಿಗೆಯವರಲ್ಲಿ ಸಿಸಿಪಸ್‌ ಕೂಡ ಒಬ್ಬರು.ವಿಶ್ವ ನಾಲ್ಕನೇ ಕ್ರಮಾಂಕದ ಆಟಗಾರ ಡೇನಿಯಲ್‌ ಮೆಡ್ವೆಡೇವ್‌, ಅಲೆಕ್ಜಾಂಡರ್‌ ಜ್ವೆರೆವ್‌ ಕೂಡ ಗಮನ ಸೆಳೆಯುತ್ತಿದ್ದಾರೆ. ಆದರೆ ಈ ವರ್ಷ ಮೂವರು ದಿಗ್ಗಜರನ್ನು ಬೇರೆ ಬೇರೆ ಸಂದರ್ಭದಲ್ಲಿ ಸೋಲಿಸಿರುವ ಸಿಸಿಪಸ್‌, ಹೊಸ ವರ್ಷವನ್ನು ಭರವಸೆ, ವಿಶ್ವಾಸದೊಡನೆ ಎದುರುನೋಡುವ ಸೂಚನೆ ಮೂಡಿಸಿದ್ದಾರೆ.