ಸ್ಕಾರ್ಪೀನ್ ದರ್ಜೆಯ 4ನೇ ಜಲಾಂತರ್ಗಾಮಿ ನೌಕೆ “ಐಎನ್‌ಎಸ್ ವೇಲಾ” ಸೇರ್ಪಡೆಗೆ ಸಜ್ಜು

0
22

ಭಾರತೀಯ ನೌಕಾಪಡೆಗೆ ಅತ್ಯಾಧುನಿಕ ಸ್ಕಾರ್ಪೀನ್ ದರ್ಜೆಯ ಮತ್ತೊಂದು ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವೇಲಾ ಸೇರ್ಪಡೆಗೆ ಸಜ್ಜಾಗಿದೆ.

ಮುಂಬಯಿ: ಭಾರತೀಯ ನೌಕಾಪಡೆಗೆ ಅತ್ಯಾಧುನಿಕ ಸ್ಕಾರ್ಪೀನ್ ದರ್ಜೆಯ ಮತ್ತೊಂದು ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವೇಲಾ ಸೇರ್ಪಡೆಗೆ ಸಜ್ಜಾಗಿದೆ. 
 
ಮಝಗಾಂವ್ ಡಾಕ್ ಹಡಗುಕಟ್ಟೆಯಲ್ಲಿ ಈ ಜಲಾಂತರ್ಗಾಮಿಯ ಅಂತಿಮ ಜೋಡಣೆಗಳನ್ನು ಪೂರ್ಣಗೊಳಿಸಲಾಗಿದ್ದು, ಇಂದು(ಮೇ 6) ರಂದು ಅದರ ಉದ್ಘಾಟನೆ ನೆರವೇರಿತು. 

ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿರುವ ಸ್ಕಾರ್ಪೀನ್ ದರ್ಜೆಯ ಆರು ಜಲಾಂತರ್ಗಾಮಿಗಳ ಪೈಕಿ ಇದು ನಾಲ್ಕನೆಯದಾಗಿದೆ. 

ಭಾರತೀಯ ನೌಕಾಪಡೆಯ ಪ್ರಾಜೆಕ್ಟ್‌-75 ಭಾಗವಾಗಿ ಫ್ರಾನ್ಸ್‌ನ ಡಿಸಿಎನ್‌ಎಸ್‌ (ನೇವಲ್ ಗ್ರೂಪ್‌ ಎಂದು ಮರುನಾಮಕರಣಗೊಂಡಿದೆ) ಜತೆ 2005ರಲ್ಲಿ ಸಹಿ ಮಾಡಲಾದ ಗುತ್ತಿಗೆಯಡಿ ಜಲಾಂತರ್ಗಾಮಿಯ ಹೊರ ಭಾಗದ ಜೋಡಣೆಗಳನ್ನು ಪೂರ್ಣಗೊಳಿಸಲಾಗಿದೆ. 

ಮೊದಲನೆ ಜಲಾಂತರ್ಗಾಮಿ 2012ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗಬೇಕಿತ್ತು. ಆದರೆ ಪದೇ ಪದೇ ವಿಳಂಬವಾಯಿತು. 

ಆರು ಜಲಾಂತರ್ಗಾಮಿಗಳ ಪೈಕಿ ಐಎನ್‌ಎಸ್ ಕಲವರಿ ಕಳೆದ ಡಿಸೆಂಬರ್‌ನಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿತ್ತು. ಐಎನ್‌ಎಸ್‌ ಖಂಡೇರಿ ಮತ್ತು ಐಎನ್‌ಎಸ್‌ ಕಾರಂಜ್ ಜಲಾಂತರ್ಗಾಮಿಗಳು ನೌಕಾಪಡೆಗೆ ಸೇರ್ಪಡೆಯಾಗುವ ಅಂತಿಮ ಹಂತದಲ್ಲಿವೆ. 

ಉಳಿದ ಎರಡು- ಐಎನ್‌ಎಸ್‌ ವಾಗಿರ್ ಮತ್ತು ಐಎನ್‌ಎಸ್‌ ವಗ್‌ಶೀರ್‌ ಕೂಡ ಮಝಗಾಂವ್ ಡಾಕ್‌ನಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿವೆ. 

ಹಿಂದೂ ಮಹಾಸಾಗರದಲ್ಲಿ ಚೀನೀ ಯುದ್ಧನೌಕೆಗಳ ಗಸ್ತು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಈ ಜಲಾಂತರ್ಗಾಮಿಗಳ ಸೇರ್ಪಡೆ ಹೆಚ್ಚು ಮಹತ್ವದ್ದಾಗಿದೆ. 

2020ರ ವೇಳೆಗೆ ಚೀನಾದ ಜಲಾಂತರ್ಗಾಮಿಗಳ ಸಂಖ್ಯೆ 65ರಿಂದ 70ಕ್ಕೆ ಏರುವ ನಿರೀಕ್ಷೆಯಿದೆ. 

 
ಐದನೆಯ ಸ್ಕಾರ್ಪೀನ್ ದರ್ಜೆ ಜಲಾಂತರ್ಗಾಮಿ ಕೂಡ ಶೀಘ್ರವೇ ನೌಕಾಪಡೆಗೆ ದೊರೆಯಲಿದೆ.