ಸೌರವ್ಯೂಹದಾಚೆಗಿದೆ ಮತ್ತೊಂದು ಭೂಮಿ

0
29

ಮುಂದೊಂದು ದಿನ ಭೂಮಿಯಂತೆ ಜೀವ ಜಾಲದ ಸೃಷ್ಟಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸಬಹುದಾದ ಗ್ರಹಗಳ ಗುಂಪೊಂದನ್ನು ಕೇಂಬ್ರಿಜ್‌ ವಿವಿಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಲಂಡನ್‌ : ಮುಂದೊಂದು ದಿನ ಭೂಮಿಯಂತೆ ಜೀವ ಜಾಲದ ಸೃಷ್ಟಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸಬಹುದಾದ ಗ್ರಹಗಳ ಗುಂಪೊಂದನ್ನು ಕೇಂಬ್ರಿಜ್‌ ವಿವಿಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ. 

ಸೌರವ್ಯೂಹದ ಹೊರಗಿರುವ ಈ ಗ್ರಹಗಳಲ್ಲಿ, ಈ ಹಿಂದೆ ಭೂಮಿಯಲ್ಲಿ ಜೀವ ಜಾಲ ಸೃಷ್ಟಿಗೆ ಕಾರಣವಾದಂತಹುದೇ ರಾಸಾಯನಿಕ ವಾತಾವರಣವಿದೆ ಎನ್ನಲಾಗಿದ್ದು, ಪ್ರಸಕ್ತ ಕಲ್ಲಿನಿಂದ ಆವೃತ್ತವಾಗಿರುವ ಮೇಲ್ಮೈ ಮೇಲೆ ಜೀವ ಸಂಕುಲ ತಲೆ ಎತ್ತಬಹುದು ಎಂದಿದೆ. 

ಕೇಂಬ್ರಿಜ್‌ ವಿವಿ ಮತ್ತು ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಯೋಗಾಲಯದ ಮಾನ್ಯತೆ ಹೊಂದಿರುವ ಸಂಶೋಧಕರ ತಂಡದ ಪ್ರಮುಖರಾಗಿರುವ ಪೌಲ್‌ ರಿಮ್ಮರ್‌ ಅವರು, ‘ವಿಶ್ವದಲ್ಲಿ ನಾವು ಏಕಾಂಗಿಗಳೇ ಎಂಬ ಪ್ರಶ್ನೆಗೆ ಈ ಸಂಶೋಧನೆ ಉತ್ತರ ಕೊಡುವ ಹಾದಿಯಲ್ಲಿ ಸ್ವಲ್ಪ ಮುನ್ನಡೆ ಸಾಧಿಸಿದೆ,’ ಎಂದಿದ್ದಾರೆ. 

ಜೀವ ಸೃಷ್ಟಿಗೆ ಬೆಳಕೇ ಮೂಲ 

ಗ್ರಹದಲ್ಲಿ ಜೀವ ಸೃಷ್ಟಿಯಾಗಲು ಬೆಳಕೇ ಮೂಲ.ಸೂರ್ಯ ಅಥವಾ ಮಾತೃ ತಾರೆಯ ಅತಿಯಾದ ಉಷ್ಣತೆ ಎಲ್ಲವನ್ನೂ ಸುಟ್ಟು ಹಾಕಿದರೆ, ಬೆಳಕಿಲ್ಲದ ಸ್ಥಿತಿ ಹೆಪ್ಪುಗಟ್ಟಿಸುವ ಚಳಿ ಜತೆ ಕತ್ತಲೆಗೆ ಕಾರಣವಾಗುತ್ತದೆ. ಹಾಗಾಗಿ, ಹಿತವಾದ ಬೆಳಕೇ ಜೀವಸೃಷ್ಟಿಗೆ ಬಲ. ಭೂಮಿ ಅಂತಹುದೇ ಹಿತಕರ ಸ್ಥಿತಿಯಲ್ಲಿದೆ. ವಿಜ್ಞಾನಿಗಳು ಗುರುತಿಸಿರುವ ಹೊಸ ಗ್ರಹದಲ್ಲೂ ಭೂಮಿಯಷ್ಟೇ ಪ್ರಮಾಣದ ನೀಲಾತೀತ ಕಿರಣಗಳಿವೆ. ಅಷ್ಟೇ ಉಷ್ಣತೆ ಇದೆ. ಇದು ಮುಂದೊಂದು ದಿನ ರಾಸಾಯನಿಕ ಕ್ರಿಯೆ ಸೃಷ್ಟಿಸಿ ಜೀವಜಾಲಕ್ಕೆ ಕಾರಣವಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಭೂಮಿಯಲ್ಲಿ ಹುಟ್ಟು ಆಗಿದ್ದು ಹೇಗೆ? 
ಭೂಮಿಯಲ್ಲಿ ಜೀವಜಾಲ ಸೃಷ್ಟಿಗೆ ಕಾರಣ ಅತ್ಯುಗ್ರ ವಿಷ ಎನ್ನುವ ಸಯನೈಡ್‌ ಎಂದರೆ ನಂಬಲೇಬೇಕು! ಒಂದು ವಾದದ ಪ್ರಕಾರ, ಇನ್ನೂ ಯೌವನಾವಸ್ಥೆಯಲ್ಲಿದ್ದ ಭೂಮಿಗೆ ಉಲ್ಕೆಗಳು ಅಪ್ಪಳಿಸಿದಾಗ ವಾತಾವರಣದಲ್ಲಿದ್ದ ಸಾರಜನಕದ ಜತೆ ವರ್ತಿಸಿ ಹೈಡ್ರೋಜನ್‌ ಸಯನೈಡ್‌ ರೂಪುಗೊಂಡಿತು. ಈ ಜಲಜನಕದ ಸಯನೈಡ್‌ ಮಳೆಯಂತೆ ಭೂಮಿಯ ಮೇಲ್ಮೈಗೆ ಬಿದ್ದಾಗ ಸೂರ್ಯನ ನೀಲಾತೀತ ಕಿರಣಗಳ ಕಾರಣದಿಂದ ನಾನಾ ಕ್ರಿಯೆಗಳು ನಡೆದವು. ಹಾಗೆ ಹುಟ್ಟಿದ ವಸ್ತುಗಳಲ್ಲೊಂದು ಆರ್‌ಎನ್‌ಎ(ರಿಯಾಕ್ಸಿ ರೈಬೋ ನ್ಯೂಕ್ಲಿಯಿಕ್‌ ಆಸಿಡ್‌)ನ ಮೂಲ ಕಣ. ಇದೇ ಮುಂದೆ ಡಿಎನ್‌ಎ ಸೃಷ್ಟಿಗೆ ಕಾರಣವಾಯಿತು. ಡಿಎನ್‌ಎ ಮೊದಲ ಜೀವ ಕಣ ಎನ್ನುವುದು ವಿಜ್ಞಾನಿಗಳ ನಂಬಿಕೆ. 

ದೂರದಲ್ಲೊಬ್ಬ ಸೋದರಿ! 

ಭೂಮಿಯಂಥ ಗ್ರಹ ಪತ್ತೆಯಾಗಿರುವುದು ಮೊದಲೇನಲ್ಲ. ಕೆಪ್ಲೆರ್‌ 452ಬಿ ಇಂಥ ಹಲವು ಜೀವ ಸೃಷ್ಟಿಯೋಗ್ಯ ಗ್ರಹಗಳನ್ನು ಗುರುತಿಸಿದೆ. ‘ಭೂಮಿಯ ಸೋದರಿ’ ಎಂದೇ ಗುರುತಿಸಲಾದ ಗ್ರಹ ಅದರಲ್ಲೊಂದು. ಆದರೆ, ಸದ್ಯದ ತಂತ್ರಜ್ಞಾನ ಅಲ್ಲಿವರೆಗೆ ತಲುಪುವಷ್ಟು ಶಕ್ತವಾಗಿಲ್ಲ. ನಾಸಾದ ಶಕ್ತಿಶಾಲಿ ಟೆಲಿಸ್ಕೋಪ್‌ಗಳಾದ ಟೆಸ್‌ ಮತ್ತು ಜೇಮ್ಸ್‌ ವೆಬ್‌ ಮುಂದಿನ ದಿನಗಳಲ್ಲಿ ಅವುಗಳ ಮೇಲೆ ನಿಗಾ ಇಡಬಹುದು.