ಸೌದಿ ಅರೇಬಿಯಾ: ಮಹಿಳಾ ಸಂಬಂಧಿಕರ ಮೇಲೆ ಕಣ್ಣಿರಿಸುವ ಆ್ಯಪ್

0
492

ಸೌದಿ ಅರೇಬಿಯಾದಲ್ಲಿ ಪುರುಷರು ತಮ್ಮ ಮಹಿಳಾ ಸಂಬಂಧಿಕರ ಮೇಲೆ ನಿಗಾ ಇಡುವಂತಹ ಆ್ಯಪ್‌ವೊಂದನ್ನು ಅಭಿವೃದ್ಧಿ‍ಪಡಿಸಲಾಗಿದೆ. ಇದರಿಂದ ಮಹಿಳೆಯರ ಮೇಲೆ ಶೋಷಣೆ ಆಗಲಿದೆ ಎನ್ನುವ ಟೀಕೆ ವ್ಯಕ್ತವಾಗಿದ್ದು, ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳು ಈ ಆ್ಯಪ್ ತೆಗೆದುಹಾಕಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ರಿಯಾದ್ (ಎಎಫ್‌ಪಿ): ಸೌದಿ ಅರೇಬಿಯಾದಲ್ಲಿ ಪುರುಷರು ತಮ್ಮ ಮಹಿಳಾ ಸಂಬಂಧಿಕರ ಮೇಲೆ ನಿಗಾ ಇಡುವಂತಹ ಆ್ಯಪ್‌ವೊಂದನ್ನು ಅಭಿವೃದ್ಧಿ‍ಪಡಿಸಲಾಗಿದೆ. ಇದರಿಂದ ಮಹಿಳೆಯರ ಮೇಲೆ ಶೋಷಣೆ ಆಗಲಿದೆ ಎನ್ನುವ ಟೀಕೆ ವ್ಯಕ್ತವಾಗಿದ್ದು, ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳು ಈ ಆ್ಯಪ್ ತೆಗೆದುಹಾಕಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. 

ಆ್ಯಂಡ್ರಾಯ್ಡ್ ಹಾಗೂ ಆ್ಯಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ ‘ದಿ ಅಬ್ಶರ್ ಆ್ಯಪ್’ ಲಭ್ಯವಿದ್ದು, ಇದರ ಬಳಕೆಗೆ ಅವಕಾಶ ನೀಡಿರುವುದಕ್ಕೆ ಮಾನವ ಹಕ್ಕುಗಳ ಸಂಘಟನೆ ಹಾಗೂ ಅಮೆರಿಕದ ಸಂಸದರು ಈ ತಂತ್ರಜ್ಞಾನ ಸಂಸ್ಥೆಗಳನ್ನು 
ಟೀಕಿಸಿದ್ದಾರೆ. ಆದರೆ ಸೌದಿ ಸರ್ಕಾರ ಇದರ ಬಳಕೆ ಸಮರ್ಥಿಸಿಕೊಂಡಿದೆ. 

‘ದಿ ಅಬ್ಶರ್ ಆ್ಯಪ್’ನಿಂದ ಮಹಿಳೆಯರು ಸೇರಿದಂತೆ ಸಮಾಜದ ಎಲ್ಲರಿಗೂ ಅಗತ್ಯ ಸೇವೆಗಳು ದೊರಕುತ್ತವೆ ಎಂದು ಆಂತರಿಕ ಸಚಿವಾಲಯ ಹೇಳಿದೆ. 

ಉಚಿತವಾಗಿರುವ ‘ದಿ ಅಬ್ಶರ್ ಆ್ಯಪ್’ ಮೂಲಕ ಬಳಕೆದಾರರು ಪಾಸ್‌ಪೋರ್ಟ್‌, ವೀಸಾ ನವೀಕರಣ ಮಾಡುವುದು ಸೇರಿದಂತೆ ಇತರೆ ವಿದ್ಯುನ್ಮಾನ ಸೇವೆಗಳನ್ನು ಬಳಸಿಕೊಳ್ಳಬಹುದು.

‘ಈ ಆ್ಯಪ್‌ಗಳನ್ನು ಬಳಸಿ ಮಹಿಳೆಯರ ಮೇಲೆ ಶೋಷಣೆ ಮಾಡಲಾಗುತ್ತದೆ’ ಎಂದು ಅಮೆರಿಕ ಸಂಸದ ರಾನ್ ವಯ್ಡನ್ ಹೇಳಿದ್ದಾರೆ. 

‘ಆ್ಯಪ್ ಬಗ್ಗೆ ನನಗೆ ತಿಳಿದಿಲ್ಲ. ಪರಿಶೀಲಿಸುತ್ತೇನೆ’ ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಅಮೆರಿಕದ ನ್ಯಾಷನಲ್ ಪಬ್ಲಿಕ್ ರೇಡಿಯೊಗೆ ತಿಳಿಸಿದ್ದಾರೆ.  ಸೌದಿ ಕಾನೂನಿನ ಪ್ರಕಾರ ಮಹಿಳೆಯರು ತಮ್ಮ ಪಾಸ್‌ಪೋರ್ಟ್ ನವೀಕರಣಗೊಳಿಸಲು ಅಥವಾ ದೇಶದಿಂದ ಹೊರಹೋಗಲು ಪತಿ ಅಥವಾ ಪುರುಷ ಸಂಬಂಧಿಕರ ಒಪ್ಪಿಗೆ ಪಡೆಯಬೇಕು.