ಸೌದಿ ಅರೇಬಿಯಾದಲ್ಲಿ 35 ಭಾರತೀಯರ ರಕ್ಷಣೆ

0
17

ಸೌದಿ ಅರೇಬಿಯಾದ ಅಲ್ ಕರ್ಜ್ ನಲ್ಲಿ 35 ಭಾರತೀಯರನ್ನು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆಂದು ಭಾನುವಾರ ತಿಳಿದುಬಂದಿದೆ.

35 ಮಂದಿಯ ಪೈಕಿ ರಕ್ಷಣೆಗೊಳಗಾಗಿರುವ ಪಂಜಾಬ್ ಮೂಲಕ ಅಮನ್ದೀಪ್ ಮತ್ತು ಬುತಾ ಸಿಂಗ್ ಎಂಬುವವರು ಮಾತನಾಡಿ, 2015ರಲ್ಲಿ ನಾವು ಸೌದಿ ಅರೇಬಿಯಾಗೆ ಹೋಗಿದ್ದವು. ಯುನೈಟೆಡ್ ಇಂಜಿನಿಯರಿಂಗ್ ಕಸ್ಟ್ರಕ್ಷನ್ಸ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ಸೌದಿಗೆ ಹೋದ ಬಳಿಕ ನಮ್ಮ ಬಳಿ ಇದ್ದ ಪಾಸ್’ಪೋರ್ಟ್’ನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ನಾವು ಮಾಡುತ್ತಿದ್ದ ಕೆಲಸಕ್ಕೆ ಸರಿಯಾಗಿ ವೇತನವನ್ನು ನೀಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 
 
2 ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೆವು. ರಜೆ ಕೇಳಲು ಆರಂಭಿಸಿದಾಗ ಸಮಸ್ಯೆ ನೀಡಲು ಆರಂಭಿಸಿದ್ದರು. ಒಪ್ಪಂದದ ಅವಧಿ ಪೂರ್ಣಗೊಂಡಿದ್ದು, ಇನ್ನು ಮುಂದೆ ವೇತನವನ್ನು ನೀಡುವುದಿಲ್ಲ ಎಂದು ಕಂಪನಿ ಹೇಳಿತ್ತು. ಬಳಿಕ ನಾವು ಮುಷ್ಕರಕ್ಕೆ ಮುಂದಾದಾಗ ಕಂಪನಿಯ ಅಧಿಕಾರಿಗಳು ನಮ್ಮ ಜೊತೆಗಿದ್ದ ಮೂವರನ್ನು ಬಂಧನಕ್ಕೊಳಪಡಿಸಿದರು. ಬಳಿಕ ನಾವು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡೆವು ಎಂದು ತಿಳಿಸಿದ್ದಾರೆ.