ಸೆಮೆನ್ಯಾ ಬೆಂಬಲಕ್ಕೆ ನಿಂತ ದ್ಯುತಿ (ಟೆಸ್ಟೊಸ್ಟೆರಾನ್‌ ನಿಯಮದ ವಿರುದ್ಧ ಭಾರತದ ಅಥ್ಲೀಟ್‌ ಕಿಡಿ)

0
16

‘ಮಹಿಳಾ ಅಥ್ಲೀಟ್‌ಗಳಲ್ಲಿ ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ (ಐಎಎಎಫ್‌) ಜಾರಿಗೆ ತರಲು ಉದ್ದೇಶಿ ಸಿರುವ ಟೆಸ್ಟೊಸ್ಟೆರಾನ್‌ ನಿಯಮದ ಪರ ಕ್ರೀಡಾ ನ್ಯಾಯಾಲಯ ತೀರ್ಪು ನೀಡಿರುವುದು ಬೇಸರ ತರಿಸಿದೆ.

ನವದೆಹಲಿ (‍ಎಎಫ್‌ಪಿ): ‘ಮಹಿಳಾ ಅಥ್ಲೀಟ್‌ಗಳಲ್ಲಿ ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ (ಐಎಎಎಫ್‌) ಜಾರಿಗೆ ತರಲು ಉದ್ದೇಶಿ ಸಿರುವ ಟೆಸ್ಟೊಸ್ಟೆರಾನ್‌ ನಿಯಮದ ಪರ ಕ್ರೀಡಾ ನ್ಯಾಯಾಲಯ ತೀರ್ಪು ನೀಡಿರುವುದು ಬೇಸರ ತರಿಸಿದೆ. ಇದರಿಂದ ಕಾಸ್ಟರ್‌ ಸೆಮೆನ್ಯಾಗೆ ಅನ್ಯಾಯವಾಗಲಿದೆ. ಹೊಸ ನಿಯಮ ಜಾರಿಗೊಂಡರೆ ಸೆಮೆನ್ಯಾ ಕ್ರೀಡಾ ಬದುಕಿಗೆ ದೊಡ್ಡ ಹೊಡೆತ ಬೀಳುತ್ತದೆ. ಅವರು ನನ್ನಂತೆಯೇ ನೋವಿನ ದಿನಗಳನ್ನು ಆನುಭವಿಸಬೇಕಾಗುತ್ತದೆ’ ಎಂದು ಭಾರತದ ಅಥ್ಲೀಟ್‌ ದ್ಯುತಿ ಚಾಂದ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಐಎಎಎಫ್‌ ಜಾರಿಗೆ ತರಲು ನಿರ್ಧರಿಸಿರುವ ಹೊಸ ನಿಯಮದಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿ ದಕ್ಷಿಣ ಆಫ್ರಿಕಾದ ಸೆಮೆನ್ಯಾ, ಕ್ರೀಡಾ ನ್ಯಾಯಾಲಯದಲ್ಲಿ ಮೊಕ ದ್ದಮೆ ಹೂಡಿದ್ದರು. ಮೇ 1 ರ ಬುಧವಾರ ನ್ಯಾಯಾಲಯವು ಸೆಮೆನ್ಯಾ ಮನವಿಯ ವಿರುದ್ಧ ತೀರ್ಪು ನೀಡಿತ್ತು.

ಈ ಹಿಂದೆ ಐಎಎಎಫ್‌, ದ್ಯುತಿ ಅವರ ಮೇಲೆ ನಿಷೇಧ ಹೇರಿತ್ತು. ಭಾರತದ ಅಥ್ಲೀಟ್‌ನ ದೇಹದಲ್ಲಿ ಪುರುಷ ಹಾರ್ಮೋನುಗಳು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿವೆ ಎಂದು ದೂರಿತ್ತು. ಐಎಎಎಫ್‌ ವಿರುದ್ಧ ಕಾನೂನು ಸಮರ ಸಾರಿದ್ದ ದ್ಯುತಿ ಅದರಲ್ಲಿ ವಿಜಯಿಯಾಗಿದ್ದರು. ಭಾರತದ ಅಥ್ಲೀಟ್‌ ಹೋದ ವರ್ಷ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ 100 ಮತ್ತು 200 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿಯ ಪದಕಗಳನ್ನು ಜಯಿಸಿದ್ದರು.

‘ಲಂಡನ್‌ನಲ್ಲಿರುವ ಪಯೋನಿಶಿ ಮಿಶ್ರಾ ಅವರ ಸಂಘಟನೆಯು ಈ ಹಿಂದೆ ನನ್ನ ಪರ ಹೋರಾಟ ಮಾಡಿ ಗೆದ್ದಿತ್ತು. ಸೆಮೆನ್ಯಾ ಪ್ರಕರಣದಲ್ಲಿ ಕಾನೂನು ಸಮರ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಮಿಶ್ರಾ ಅವರಿಗೆ ನಾನೇ ಮನವಿ ಮಾಡಿದ್ದೆ. ಅವರು ಸಾಕಷ್ಟು ಶ್ರಮಿಸಿದರು’ ಎಂದಿದ್ದಾರೆ.

‘ಸೆಮೆನ್ಯಾ, ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಹಿರಿಮೆ ಹೊಂದಿದ್ದಾರೆ. ಈಗ ಇಡೀ ದೇಶವೇ (ದಕ್ಷಿಣ ಆಫ್ರಿಕಾ) ಅವರ ಪರ ನಿಲ್ಲುತ್ತದೆ ಎಂಬ ನಂಬಿಕೆ ನನಗಿದೆ. ಟೆಸ್ಟೊಸ್ಟೆರಾನ್‌ ಪ್ರಮಾಣವನ್ನು ಅಗತ್ಯವಿದ್ದಾಗ ಹೆಚ್ಚಿಸಿಕೊಳ್ಳಲು, ಬೇಡವೆಂದಾಗ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ಸಹಜ ಪ್ರಕ್ರಿಯೆ. ವೈದ್ಯ ಲೋಕದ ಪರಿಣತರು ಈ ವಿಷಯದಲ್ಲಿ ಸೆಮೆನ್ಯಾಗೆ ಅಗತ್ಯ ಸಲಹೆಗಳನ್ನು ನೀಡಬಹುದು’ ಎಂದು ಹೇಳಿದ್ದಾರೆ.

ಎಸ್‌ಎಫ್‌ಟಿ ಮೊರೆ ಹೋಗಲು ಎಎಸ್‌ಎ ಚಿಂತನೆ: ಕ್ರೀಡಾ ನ್ಯಾಯಾಲಯವು ಸೆಮೆನ್ಯಾ ಮನವಿ ತಿರಸ್ಕರಿಸಿರುವುದನ್ನು ಸ್ವಿಸ್‌ ಫೆಡರಲ್‌ ಟ್ರಿಬ್ಯೂನಲ್‌ನಲ್ಲಿ (ಎಸ್‌ಎಫ್‌ಟಿ) ‍ಪ್ರಶ್ನಿಸಲು ಅಥ್ಲೆಟಿಕ್ಸ್‌ ದಕ್ಷಿಣ ಆಫ್ರಿಕಾ (ಎಎಸ್‌ಎ) ಚಿಂತಿಸಿದೆ.

‘ಕ್ರೀಡಾ ನ್ಯಾಯಾಲಯದ ತೀರ್ಪಿನಿಂದ ಆಘಾತವಾಗಿದೆ. ಹೀಗಿ ದ್ದರೂ ತೀರ್ಪನ್ನು ಗೌರವಿಸುತ್ತೇವೆ. ಇದನ್ನು ಎಸ್‌ಎಫ್‌ಟಿಯಲ್ಲಿ ಪ್ರಶ್ನಿಸುವ ಕುರಿತು ಚಿಂತನೆ ನಡೆದಿದೆ. ಇನ್ನು 30 ದಿನಗಳ ಕಾಲಾವಕಾಶ ಇದ್ದು ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಅಥ್ಲೆಟಿಕ್ಸ್‌ ದಕ್ಷಿಣ ಆಫ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡೈಮಂಡ್‌ ಲೀಗ್‌ನಲ್ಲಿ ಸೆಮೆನ್ಯಾ ಕಣಕ್ಕೆ: ಸೆಮೆನ್ಯಾ ಅವರು ಮೇ 2 ರ ಶುಕ್ರವಾರದಿಂದ ಕತಾರ್‌ನ ದೋಹಾದಲ್ಲಿ ನಡೆಯುವ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

800 ಮೀಟರ್ಸ್‌ ಓಟದಲ್ಲಿ ಸೆಮೆನ್ಯಾಗೆ ಫ್ರಾನ್ಸೀನ್‌ ನಿಯೋನ್‌ಸ್ಯಾಬ್‌ ಸವಾಲು ಎದುರಾಗಲಿದೆ.