ಸೆಪ್ಟೆಂಬರ್ 27: ವಿಶ್ವ ಪ್ರವಾಸೋದ್ಯಮ ದಿನ

0
35

ಇಂದು ವಿಶ್ವ ಪ್ರವಾಸೋದ್ಯಮ ದಿನ, ಪ್ರವಾಸ ಎಂದರೆ ಎಲ್ಲರಿಗೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ ಮತ್ತು ವಿಭಿನ್ನ ಅನುಭವಗಳನ್ನು ನಮಗೆ ಈ ಪ್ರವಾಸ ನೀಡುತ್ತದೆ. ನಮ್ಮ ಮನಸ್ಸಿಗೆ ಉಲ್ಲಾಸ ಮತ್ತು ಹೊಸ ಅನುಭವಗಳಿಂದ ಕಲಿಯುವಂತೆ ಮಾಡುತ್ತದೆ.

ವಿಶ್ವ ಪ್ರವಾಸೋದ್ಯಮ ದಿನ

ಪ್ರವಾಸ ಎಂಬುದು ಒಂದು ಕಲಿಕೆಯ ಉದ್ದೇಶದ ಸಾಧನೆಯಾಗಿದೆ. ನಾವು ಪ್ರವಾಸಕ್ಕೆ ಹೋದಾಗ ಅಲ್ಲಿ ನಮ್ಮ ಕಣ್ಣಿಗೆ ಕಾಣುವ ಹಲವಾರು ವಿಷಯಗಳ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ.

ಪ್ರವಾಸೋದ್ಯಮದಲ್ಲಿ ಕೃಷಿ ಪ್ರವಾಸೋದ್ಯಮ, ಅಡುಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ ಹೀಗೆ ಹಲವು ಬಗೆಯ ಪ್ರವಾಸಗಳಿವೆ.

ಪ್ರವಾಸೋದ್ಯಮದಿಂದ ಸಾಕಷ್ಟು ಲಾಭವಿದ್ದು ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭ ತರುವುದರಿಂದ ಅಲ್ಲಿ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಅಲ್ಲದೇ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ.

ಪ್ರವಾಸೋದ್ಯಮ ದಿನದ ಹಿನ್ನಲೆ

1997 ರಿಂದ ಅಚರಣೆಯಲ್ಲಿರುವ ಈ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು. ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ.

1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು. ಈ ಕತಾರ್ ನಲ್ಲಿ “ಅಭಿವೃದ್ದಿಗಾಗಿ ಸುಸ್ಥಿರ ಪ್ರವಾಸ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಭಾರತದಲ್ಲಿ ಪ್ರವಾಸೋದ್ಯಮ ಸ್ಥಿತಿ

ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹಾಗೆಯೇ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. 

ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡಕ್ಕೆ ಮುಂದಿನ ಹತ್ತು ವರ್ಷಗಳವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ.