ಸೆಪ್ಟೆಂಬರ್ 15 ರ ಬ್ಯಾಡ್ಮಿಂಟನ್‌ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
12

ಈ ಕೆಳಗೆ ಬ್ಯಾಡ್ಮಿಂಟನ್‌ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ಬೆಲ್ಜಿಯನ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಶಸ್ತಿ ಗೆದ್ದ ಲಕ್ಷ್ಯ ಸೇನ್‌

ಲಿವೆನ್‌, ಬೆಲ್ಜಿಯಂ (ಪಿಟಿಐ): ಭಾರತದ ಲಕ್ಷ್ಯ ಸೇನ್‌ ಬೆಲ್ಜಿಯನ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ನ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಸೆಪ್ಟೆಂಬರ್ 14 ರ ಶನಿವಾರ ರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು ಎರಡನೇ ಶ್ರೇಯಾಂಕದ ಡೆನ್ಮಾರ್ಕ್‌ನ ಆಟಗಾರ ವಿಕ್ಟರ್‌ ಸ್ವೆಂಡ್‌ಸೆನ್‌ ಅವರನ್ನು ಸೋಲಿಸಿದರು.

34 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ ಭಾರತದ ಆಟಗಾರ 21–14, 21–15 ಗೇಮ್‌ಗಳಿಂದ ಜಯಭೇರಿ ಮೊಳಗಿಸಿದರು.

ಶುಕ್ರವಾರ ರಾತ್ರಿ ನಡೆದ ಜಿದ್ದಾಜಿ ದ್ದಿಯಿಂದ ಕೂಡಿದ ಸೆಮಿಫೈನಲ್‌ ಪಂದ್ಯದಲ್ಲಿ ಲಕ್ಷ್ಯ ಅವರು ಡೆನ್ಮಾರ್ಕ್‌ನ ಕಿಮ್‌ ಬ್ರೂನ್‌ ವಿರುದ್ಧ 21–14, 21–15ರಿಂದ ಗೆದ್ದಿದ್ದರು.

 

ವಿಯೆಟ್ನಾಂ ಓಪನ್: ಸೌರಭ್ ಜಯಭೇರಿ

ಹೊ ಚಿ ಮಿನ್ ಸಿಟಿ (ಪಿಟಿಐ): ಭಾರತದ ಸೌರಭ್ ವರ್ಮಾ  ಸೆಪ್ಟೆಂಬರ್ 15 ರ ಭಾನುವಾರ ವಿಯೆಟ್ನಾಂ ಓಪನ್ ಬಿಡಬ್ಲ್ಯುಎಫ್ ಟೂರ್ ಸೂಪರ್ 100 ಪ್ರಶಸ್ತಿಯನ್ನು ಗೆದ್ದುಕೊಂಡರು.

ಫೈನಲ್‌ನಲ್ಲಿ ಅವರು 21–12, 17–21, 21–14ರಿಂದ  ಚೀನಾದ ಸನ್ ಫೀ ಯಾಂಗ್ ವಿರುದ್ಧ ಜಯ ಗಳಿಸಿದರು. 

ಮೊದಲ ಗೇಮ್‌ನ ಆರಂಭದಲ್ಲಿ 4–0 ಮುನ್ನಡೆ ಪಡೆದ ಅವರು ನಂತರ ಅದನ್ನು 15–4ಕ್ಕೆ ಹೆಚ್ಚಿಸಿಕೊಂಡರು. ನಂತರ ಗೇಮ್ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಚುರುಕಾದ ಆಟದ ಮೂಲಕ ಸನ್ ತಿರುಗೇಟು ನೀಡಿದರು. ಸೌರಭ್‌ ಪಟ್ಟು ಬಿಡದೆ ಆಡಿದರೂ ಎದುರಾಳಿ ಗೇಮ್ ಗೆದ್ದರು.

ಇದರಿಂದಾಗಿ ಮೂರನೇ ಗೇಮ್ ಕುತೂಹಲ ಕೆರಳಿಸಿತು. ಇಬ್ಬರೂ ಆರಂಭದಿಂದಲೇ ಜಿದ್ದಿಗೆ ಬಿದ್ದರು. 4–2ರ ಅಲ್ಪ ಮುನ್ನಡೆಯಲ್ಲಿದ್ದ ಚೀನಾದ ಆಟಗಾರನ್ನು ಹಿಂದಿಕ್ಕುವ ಸೌರಭ್ ಪ್ರಯತ್ನ ಫಲಿಸಿತು. 17–14ರವರೆಗೆ ತಮ್ಮ ಮುನ್ನಡೆ ವಿಸ್ತರಿಸುವಲ್ಲಿ ಸೌರಭ್ ಯಶಸ್ವಿಯಾದರು. ಅಷ್ಟೇ ಅಲ್ಲ. ಅಲ್ಲಿಂದ ಮುಂದೆ ಎದುರಾಳಿಗೆ ಒಂದೂ ಪಾಯಿಂಟ್‌ ಬಿಟ್ಟುಕೊಡದೇ ಗೆಲುವಿನ ದಡಕ್ಕೆ ಜಿಗಿದರು. ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮಧ್ಯಪ್ರದೇಶದ 26 ವರ್ಷದ ಸೌರಭ್ ಅವರಿಗೆ ಈ ವರ್ಷದ ಮೂರನೇ ಪ್ರಶಸ್ತಿ ಇದು. ಈಚೆಗೆ ಅವರು ಹೈದರಾಬಾದ್ ಓಪನ್ ಮತ್ತು ಸ್ಲೋವೆನಿಯನ್ ಇಂಟರ್‌ನ್ಯಾಷನಲ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಹೋದ ವರ್ಷ ಅವರು ಡಚ್ ಓಪನ್ ಮತ್ತು ಕೊರಿಯಾ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 38ನೇ ಸ್ಥಾನದಲ್ಲಿರುವ ಸೌರಭ್ ಇದೇ 24 ರಿಂದ 29ರವರೆಗೆ ನಡೆಯಲಿರುವ ಕೋರಿಯಾ ಓಪನ್ ವಿಶ್ವ ಟೂರ್ ಸೂಪರ್ 500 ಟೂರ್ನಿಯಲ್ಲಿ ಆಡಲಿದ್ದಾರೆ.