ಸೆಕ್ಷನ್‌ – 377 : ಭಾರತದಲ್ಲಿ ಸಲಿಂಗಕಾಮ ಇನ್ಮುಂದೆ ಅಪರಾಧವಲ್ಲ: ಸುಪ್ರೀಂಕೋರ್ಟ್

0
832

ಸಲಿಂಗಕಾಮವನ್ನು ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 377ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಈ ತೀರ್ಪು ನೀಡಿದೆ.

ಹೊಸದಿಲ್ಲಿ: ಸಲಿಂಗಕಾಮವನ್ನು ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 377ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಈ ತೀರ್ಪು ನೀಡಿದೆ. 

ಇನ್ನು, ಸರ್ವೋಚ್ಛ ನ್ಯಾಯಾಲಯ ಸಲಿಂಗಿಗಳಿಗೆ ಸಿಹಿ ಸುದ್ದಿ ನೀಡುತ್ತಿದ್ದಂತೆ, ದೇಶದ ಹಲವು ಕಡೆಗಳಲ್ಲಿ ಸಲಿಂಗಕಾಮಿಗಳು ಹಾಗೂ ಮಾನವ ಹಕ್ಕು ಹೋರಾಟಗಾರರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. 

ಸಲಿಂಗಕಾಮಕ್ಕೆ ದೇಶದಲ್ಲಿ ಕಾನೂನಿನ ಮಾನ್ಯತೆ ನೀಡಿದ ಸಾಂವಿಧಾನಿಕ ಪೀಠ, ಖಾಸಗಿ ಜಾಗದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಹಾನಿಯಾಗುವಂತಿಲ್ಲದಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸುವಂತಿಲ್ಲ. ಅದು ವೈಯಕ್ತಿಕ ಹಕ್ಕು ಎಂದು ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಆದರೆ, ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು ದಂಡಾರ್ಹ ಅಪರಾಧವಾಗಿಯೇ ಉಳಿದಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. 

ಸಮಾಜದಲ್ಲಿ ತುಳಿತಕ್ಕೊಳಗಾದ ಜನರನ್ನು ಮೇಲಕ್ಕೆತ್ತಲು ಕೋರ್ಟ್ ಪ್ರಗತಿಪರ ಮತ್ತು ಪ್ರಾಯೋಗಿಕ ತೀರ್ಪುಗಳನ್ನು ನೀಡಬೇಕಾಗುತ್ತದೆ. ಕಾಲ ಬದಲಾಗುತ್ತಿದ್ದಂತೆ ಕಾನೂನನ್ನು ಈ ರೀತಿ ಅರ್ಥೈಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಕಳೆದ 158 ವರ್ಷಗಳಿಂದ ಸಲಿಂಗಕಾಮ ಅಪರಾಧವಾಗಿ ಉಳಿದಿತ್ತು. 

ಸಲಿಂಗಕಾಮ ಕುರಿತ ಅರ್ಜಿಗಳ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠವು ಜುಲೈ 7ರಂದು ತೀರ್ಪು ಕಾಯ್ದಿರಿಸಿತ್ತು. 

ಯಾವುದೇ ಗಂಡು, ಹೆಣ್ಣು ಅಥವಾ ಪ್ರಾಣಿಯ ಜತೆಗೆ ನಿಸರ್ಗದ ವಿರುದ್ಧವಾಗಿ ಸ್ವಯಂ ಪ್ರೇರಣೆಯಿಂದಲೂ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧ ಎಂದು ಐಪಿಸಿ 377 ಸೆಕ್ಷನ್‌ ಹೇಳುತ್ತದೆ. ಅಲ್ಲದೆ, ಈ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ ನೀಡಿತ್ತು.