ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಫೈನಲ್: ದಕ್ಷಿಣ ಕೊರಿಯಾಗೆ 4–2ರಿಂದ ಗೆಲುವು

0
339

ಭಾರತ ಮತ್ತೊಮ್ಮೆ ಪೆನಾಲ್ಟಿ ಶೂಟೌಟ್‌ನಲ್ಲಿ ಮುಗ್ಗರಿಸಿತು. ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು 2–4 ರಿಂದ ದಕ್ಷಿಣ ಕೊರಿಯಾ ಎದುರು ಸೋತು ಪ್ರಶಸ್ತಿ ಕೈಚೆಲ್ಲಿತು.

ಇಪೊ, ಮಲೇಷ್ಯಾ (ಪಿಟಿಐ): ಭಾರತ ಮತ್ತೊಮ್ಮೆ ಪೆನಾಲ್ಟಿ ಶೂಟೌಟ್‌ನಲ್ಲಿ ಮುಗ್ಗರಿಸಿತು. ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು 2–4 ರಿಂದ ದಕ್ಷಿಣ ಕೊರಿಯಾ ಎದುರು ಸೋತು ಪ್ರಶಸ್ತಿ ಕೈಚೆಲ್ಲಿತು. ಇಲ್ಲಿ ಶನಿವಾರ ನಡೆದ ಪಂದ್ಯದ ಕೊನೆಯ ಕ್ವಾರ್ಟರ್‌ ವರೆಗೂ 1–0ಯಿಂದ ಮುನ್ನಡೆ ಸಾಧಿಸಿದ್ದ ಭಾರತ ಕೊನೆಯ ಕ್ಷಣದಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟಿತು. ನಂತರ ಶೂಟೌಟ್‌ನಲ್ಲೂ ಕೈಸುಟ್ಟುಕೊಂಡಿತು. ಭಾರತ ಈ ಹಿಂದೆ ಐದು ಬಾರಿ ಪ್ರಶಸ್ತಿ ಗೆದ್ದಿತ್ತು. ಭಾರತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದು ದಕ್ಷಿಣ ಕೊರಿಯಾ 17ನೇ ಸ್ಥಾನದಲ್ಲಿದೆ.

ಪಂದ್ಯದಲ್ಲಿ ತಂಡ ಉತ್ತಮ ಆರಂಭ ಕಂಡಿತ್ತು. ಒಂಬತ್ತನೇ ನಿಮಿಷದಲ್ಲಿ ಸಿಮ್ರನ್‌ಜೀತ್ ಸಿಂಗ್ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ನಂತರ ಭಾರತಕ್ಕೆ ಕೊರಿಯಾದ ರಕ್ಷಣಾ ವಿಭಾಗದವರು ಭಾರಿ ಪೈಪೋಟಿ ಒಡ್ಡಿದರು.

ವಿರಾಮದ ನಂತರ ಆಕ್ರಮಣಕ್ಕೂ ಒತ್ತು ನೀಡಿದ ಕೊರಿಯಾಗೆ 47ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಅವಕಾಶ ಲಭಿಸಿತು. ರೆಫರಿ ನಿರ್ಣಯದ ಮರುಪರಿಶೀಲನೆಗೆ ಭಾರತ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಅವಕಾಶವನ್ನು ಸದುಪಯೋಗ ಮಾಡಿಕೊಂಡ ಜಾಂಗ್‌ ಜೊಂಗ್‌ ಹ್ಯೂನ್‌ ಸಮಬಲ ಗಳಿಸಿಕೊಟ್ಟರು. ಶೂಟೌಟ್‌ನಲ್ಲಿ ಭಾರತದ ಆಟಗಾರರು ಒಂದು, ನಾಲ್ಕು ಮತ್ತು ಐದನೇ ಅವಕಾಶಗಳನ್ನು ಕೈಚೆಲ್ಲಿದರು. ಕೊರಿಯಾ ಕೇವಲ ಮೂರನೇ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ವಿಫಲವಾಯಿತು.