ಸುಲಲಿತ ವಹಿವಾಟು :ಜಿಗಿದ ಭಾರತ (ಜಾಗತಿಕ ಶ್ರೇಯಾಂಕದಲ್ಲಿ 63 ನೇ ಸ್ಥಾನಕ್ಕೆ ಬಡ್ತಿ : ವಿಶ್ವಬ್ಯಾಂಕ್ ವರದಿ)

0
16

ವಿಶ್ವಬ್ಯಾಂಕ್ ಪ್ರಕಟಿಸಿರುವ ಸುಲಲಿತ ಉದ್ದಿಮೆ ವಹಿವಾಟಿನ ಜಾಗತಿಕ ಶ್ರೇಯಾಂಕದಲ್ಲಿ ಭಾರತ 63 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ವಾಷಿಂಗ್ಟನ್(ಪಿಟಿಐ): ವಿಶ್ವಬ್ಯಾಂಕ್ ಪ್ರಕಟಿಸಿರುವ ಸುಲಲಿತ ಉದ್ದಿಮೆ ವಹಿವಾಟಿನ ಜಾಗತಿಕ ಶ್ರೇಯಾಂಕದಲ್ಲಿ ಭಾರತ 63 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತದ ಶ್ರೇಯಾಂಕವು 14 ಸ್ಥಾನ ಮೇಲಕ್ಕೆ ಏರಿದೆ. ಸತತ ಮೂರನೇ ವರ್ಷವೂ ಭಾರತದ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. 190 ದೇಶಗಳ ಪಟ್ಟಿಯಲ್ಲಿ ಹಿಂದಿನ ವರ್ಷ ಭಾರತ 77 ನೇ ಸ್ಥಾನದಲ್ಲಿತ್ತು. ಪ್ರಸಕ್ತ ವರ್ಷ ಭಾರತದ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುವುದಕ್ಕೆ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯನ್ನು (ಐಬಿಸಿ) ಯಶಸ್ವಿಯಾಗಿ ಜಾರಿಗೊಳಿಸಿದ್ದೇ ಮುಖ್ಯ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಯ ಪ್ರಗತಿಯ ಫಲವಾಗಿ ಭಾರತ ಆರ್ಥಿಕ ವೃದ್ಧಿ ದರವೂ (ಜಿಡಿಪಿ) ಕುಂಠಿತಗೊಳ್ಳಲಿದೆ. ಎಂದು ವಿವಿಧ ಹಣಕಾಸು ಸಂಸ್ಥೆಗಳು ಅಂದಾಜಿಸಿರುವ ಸಂದರ್ಭದಲ್ಲಿಯೇ ಈ ಶ್ರೇಯಾಂಕ ಹೆಚ್ಚಳದ ಉತ್ತೇಜಕರ ಸುದ್ದಿ ಪ್ರಕಟಗೊಂಡಿದೆ.

ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿವಿಧ ಆರ್ಥಿಕ ಸುಧಾರಣಾ ಕ್ರಮಗಳನ್ನು ವಿಶ್ವಬ್ಯಾಂಕ್ ವರದಿಯಲ್ಲಿ ಶ್ಲಾಘಿಸಲಾಗಿದೆ. ಕಳೆದ 20 ವರ್ಷಗಳಲ್ಲಿ ಕೆಲವೇ ಕೆಲ ದೇಶಗಳು ಸಾಧಿಸಿದ ಯಶಸ್ಸನ್ನು ಭಾರತ್ವೂ ಸಾಧ್ಯ ಮಾಡಿ ತೋರಿಸಿದೆ. ಅಪಾರ ಜನಸಂಖ್ಯೆ, ವಿಶಾಲ ಭೂ ಪ್ರದೇಶ ಹೊಂದಿರುವ ಭಾರತದಂತಹ ದೇಶವು ಇಂತಹ ಸಾಧನೆ ಮಾಡಿರುವುದು ಕಳೆದ 20 ವರ್ಷಗಳಲ್ಲಿಯೇ ಇದೇ ಮೊದಲು ಎಂದು ವಿಶ್ವಬ್ಯಾಂಕ್ ಶ್ಲಾಘಿಸಿದೆ. “ಭಾರತದಲ್ಲಿಯೇ ತಯಾರಿಸಿ” ಆಂದೋಲನವು ವಿದೇಶಿ ಬಂಡವಾಳವನ್ನು ಆಕರ್ಷಿಸಿದೆ. ಇದು ಖಾಸಗಿ ವಲಯ ಅದರಲ್ಲೂ ತಯಾರಿಕಾ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆ ಹೆಚ್ಚಿಸಿದೆ ಎಂದು ವಿಶ್ವಬ್ಯಾಂಕ್ ಬಣ್ಣಿಸಿದೆ.

2020 ರ ವೇಳೆಗೆ ಭಾರತವು ಮುಂಚೂಣಿ 50 ದೇಶಗಳ ಸಾಲಿನಲ್ಲಿ ಇರಬೇಕು ಎಂದು ಕೇಂದ್ರ ಸರ್ಕಾರ ಗುರಿ ನಿಗದಿಪಡಿಸಿದೆ.

ಸುಧಾರಣಾ ಕ್ರಮಗಳ ಫಲ

ಉದ್ದಿಮೆ- ವಹಿವಾಟು ಆರಂಭಿಸಲು ಪೂರಕ ಸೌಲಭ್ಯಗಳನ್ನು ಕಲ್ಪಿಸಿ, ಅಡೆ ತಡೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಸುಧಾರಣಾ ಕಾರ್ಯಕ್ರಮಗಳಿಂದ ಭಾರತದ ಶ್ರೇಯಾಂಕದಲ್ಲಿ ನಿರಂತರ ಸುಧಾರಣೆ ಕಂಡು ಬರುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಸರ್ಕಾರದ ನಿರಂತರ ಪ್ರಯತ್ನಗಳಿಂದ ಭಾರತದ ಶ್ರೇಯಾಂಕವು ಹಿಂದಿನ ಐದು ವರ್ಷಗಳಲ್ಲಿ (2014-2019) ಗಮನಾರ್ಹ ಏರಿಕೆ ಕಂಡಿದೆ. 10 ಮಾನದಂಡಗಳ ಪೈಕಿ 7 ರಲ್ಲಿ ಭಾರತದ ಸಾಧನೆ ಸುಧಾರಣೆ ಕಂಡಿದೆ. ಜಾಗತಿಕ ಮಟ್ಟದ ಮಾನದಂಡಗಳಿಗೆ ಹತ್ತಿರ ಸಾಗಿದೆ. ಉದ್ದಿಮೆಗಳ ಹಣಕಾಸು ನಷ್ಟಕ್ಕೆ ಪರಿಹಾರ ಕಂಡುಕೊಳ್ಳುವ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ, ಆಸ್ತಿಗಳ ನೋಂದಣಿ, ಸಾಗರೋತ್ತರ ವಹಿವಾಟು ಮತ್ತು ತೆರಿಗೆ ಪಾವತಿ ವಿಷಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ ಎಂದು ಸಚಿವಾಲಯ ಹೇಳಿಕೊಂಡಿದೆ

ಶ್ರೇಯಾಂಕ     ದೇಶ        

          ನ್ಯೂಜಿಲೆಂಡ್     

      2      ಸಿಂಗಪುರ        

      3      ಹಾಂಗ್ ಕಾಂಗ್

      4      ಡೆನ್‌ಮಾರ್ಕ್‌

      5      ರಿಪಬ್ಲಿಕ್‌ ಆಫ್ ಕೋರಿಯಾ

      6       ಅಮೆರಿಕ

           ಜಾರ್ಜಿಯಾ

      8       ಯುನೈಟೆಡ್‌ ಕಿಂಗ್‌ಡಮ್‌

      9       ನಾರ್ವೆ

      10     ಸ್ವೀಡನ್‌

      31     ಚೀನಾ

      63     ಭಾರತ

      108    ಪಾಕಿಸ್ತಾನ