ಸಿಲ್ವರ್ ಬಣ್ಣ ಲೇಪಿತ ಸೌರಫಲಕ: ಕಳವಳ ವ್ಯಕ್ತಪಡಿಸಿದ ಎನ್‌ಜಿಟಿ

0
507

ಸಿಲ್ವರ್ ಬಣ್ಣದ ಹಾಳೆಗಳ ಲೇಪನ (ಆ್ಯಂಟಿಮೊನಿ) ಇರುವ ಸೌರಫಲಕಗಳ ವಿಲೇವಾರಿಗೆ ನಿರ್ದಿಷ್ಟ ನಿಯಮಾವಳಿ ಇಲ್ಲದಿರುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯ
ಮಂಡಳಿ (ಎನ್‌ಜಿಟಿ) ಕಳವಳ
ವ್ಯಕ್ತಪಡಿಸಿದೆ.

ನವದೆಹಲಿ (ಪಿಟಿಐ): ಸಿಲ್ವರ್ ಬಣ್ಣದ ಹಾಳೆಗಳ ಲೇಪನ (ಆ್ಯಂಟಿಮೊನಿ) ಇರುವ ಸೌರಫಲಕಗಳ ವಿಲೇವಾರಿಗೆ ನಿರ್ದಿಷ್ಟ ನಿಯಮಾವಳಿ ಇಲ್ಲದಿರುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕಳವಳ ವ್ಯಕ್ತಪಡಿಸಿದೆ.

ಸಿಲ್ವರ್ ಬಣ್ಣದ ಲೇಪನವಿರುವ ಸೌರಫಲಕಗಳ ಉತ್ಪಾದನೆ, ಬಳಕೆ ಹಾಗೂ ಆಮದು ನಿಷೇಧಿಸಬೇಕೆಂದು ಕೋರಿ ವಕೀಲೆ ನಿಹಾರಿಕಾ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ರಘುವೇಂದ್ರ ಎಸ್. ರಾಠೋಡ್ ಹಾಗೂ ಸದಸ್ಯ ಸತ್ಯವಾನ್ ಸಿಂಗ್ ಗರ್ಬ್ಯಾಲ್ ಅವರನ್ನೊಳಗೊಂಡ ನ್ಯಾಯಪೀಠ, ‘ಈ ರೀತಿಯ ಸೌರಫಲಕಗಳ ವಿಲೇವಾರಿಗೆ ಸಂಬಂಧಿಸಿ ನಿಯಮ ಹಾಗೂ ಮಾರ್ಗಸೂಚಿಗಳನ್ನು ರೂಪಿಸಬೇಕು. ಒಂದು ವೇಳೆ ಈಗಾಗಲೇ ನಿಯಮಗಳನ್ನು ರೂಪಿಸುತ್ತಿದ್ದರೆ ಅವನ್ನು ಪೂರ್ಣಗೊಳಿಸಲು ಬೇಕಿರುವ ಕಾಲಾವಕಾಶದ ಕುರಿತು ಮಾಹಿತಿ ನೀಡಬೇಕು’ ಎಂದು ಸೂಚನೆ ನೀಡಿದೆ. 

‘ರಾಷ್ಟ್ರೀಯ ಸೌರಶಕ್ತಿ ಯೋಜನೆ ಅಡಿಯಲ್ಲಿ ಸೌರಫಲಕಗಳ ಬಳಕೆ ಹೆಚ್ಚುತ್ತಲೇ ಇದೆ. ಆದರೆ ಇವುಗಳ ಮೇಲೆ ಲೇಪಿಸುವ ಸಿಲ್ವರ್ ಬಣ್ಣದ ಹಾಳೆಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ಇದು ಪರಿಸರಕ್ಕೆ ಹಲವು ರೀತಿ ಅಪಾಯ ಉಂಟುಮಾಡುತ್ತಿದೆ. ಪ್ರಸ್ತುತ, ಈ ಹಾಳೆಗಳನ್ನು ಬಳಸಿದ ಬಳಿಕ ಪುಡಿ ಮಾಡಿ ತ್ಯಾಜ್ಯ ಸಂಗ್ರಹಿಸುವ ಸ್ಥಳಗಳಲ್ಲಿ ಸುರಿಯಲಾಗುತ್ತಿದೆ’ ಎಂದು ವಕೀಲರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 

 ದೀರ್ಘಾವಧಿಗೆ ಈ ಸಿಲ್ವರ್ ಬಣ್ಣದ ಹಾಳೆಗಳ ಸಂಪರ್ಕದಲ್ಲಿದ್ದರೆ, ಕಣ್ಣು, ಚರ್ಮ ಹಾಗೂ ಶ್ವಾಸಕೋಶದಲ್ಲಿ ಅಲರ್ಜಿ ಉಂಟಾಗಬಹುದು.‌ ಅತಿಸಾರ, ವಾಂತಿ, ಅಲ್ಸರ್ ಜತೆಗೆ ಹೃದ್ರೋಗ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

‘ಇ–ತ್ಯಾಜ್ಯ ನಿಯಮ, 2016ಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ಎನ್‌ಜಿಟಿ ಸೂಚಿಸಬೇಕು. ನಿಯಮ 16ರ ಅಡಿಯಲ್ಲಿರುವ ಅಪಾಯಕಾರಿ ವಸ್ತುಗಳ ಪಟ್ಟಿಗೆ ಆ್ಯಂಟಿಮೊನಿಯನ್ನು ಸೇರ್ಪಡೆಗೊಳಿಸಬೇಕು. ಆ್ಯಂಟಿಮೊನಿ ಇಲ್ಲದ ಸೌರಫಲಕಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಅವಕಾಶ ನೀಡಿ ಸಿಪಿಸಿಬಿ ನಿರ್ದೇಶನ ಹೊರಡಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ. 

ಅರ್ಜಿ ಸಂಬಂಧ ಮುಂದಿನ ವಿಚಾರಣೆಯನ್ನು ಫೆ.4ಕ್ಕೆ ನಿಗದಿಪಡಿಸಲಾಗಿದೆ.