ಸಿರಿಧಾನ್ಯ ಬಿತ್ತನೆ: ಹೊಸದುರ್ಗದಲ್ಲೇ ಹೆಚ್ಚು (ರೈತಸಿರಿ ಯೋಜನೆ: ತಾಲ್ಲೂಕಿನ 9,420 ರೈತರಿಗೆ 8.72 ಕೋಟಿ ಪ್ರೋತ್ಸಾಹಧನ)

0
42

ರಾಜ್ಯದ ಸಿರಿಧಾನ್ಯಗಳ ತೊಟ್ಟಿಲೆಂದು ಖ್ಯಾತಿ ಪಡೆದಿರುವ ಹೊಸದುರ್ಗ ತಾಲ್ಲೂಕಿನಲ್ಲಿ ಈ ಬಾರಿ 8,725 ಹೆಕ್ಟೇರ್‌ ಸಿರಿಧಾನ್ಯ ಬಿತ್ತನೆಯಾಗಿದೆ. ಇದು ರಾಜ್ಯದ ಉಳಿದ ತಾಲ್ಲೂಕುಗಳಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿದೆ.

ಹೊಸದುರ್ಗ: ರಾಜ್ಯದ ಸಿರಿಧಾನ್ಯಗಳ ತೊಟ್ಟಿಲೆಂದು ಖ್ಯಾತಿ ಪಡೆದಿರುವ ತಾಲ್ಲೂಕಿನಲ್ಲಿ ಈ ಬಾರಿ 8,725 ಹೆಕ್ಟೇರ್‌ ಸಿರಿಧಾನ್ಯ ಬಿತ್ತನೆಯಾಗಿದೆ. ಇದು ರಾಜ್ಯದ ಉಳಿದ ತಾಲ್ಲೂಕುಗಳಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿದೆ.

ರಾಜ್ಯ ಸರ್ಕಾರವು 2019–20ನೇ ಸಾಲಿಗೆ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ರೈತಸಿರಿ’ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಡಿ ಸಾಮೆ, ಊದಲು, ನವಣೆ, ಅರ್ಕ, ಕೊರ್ಲೆ, ಬರಗು ಸೇರಿ 6 ಸಿರಿಧಾನ್ಯಗಳಿಗೆ ಪ್ರೋತ್ಸಾಹಧನ ನೀಡಲು ನಿರ್ಧರಿಸಿತ್ತು. ಇದರ ಅಡಿ ಇಲ್ಲಿಯ ರೈತರಿಗೆ  8.72 ಕೋಟಿ ಪ್ರೋತ್ಸಾಹಧನ ಸಿಗಲಿದೆ.

ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ 10,000 ನಗದು ಪ್ರೋತ್ಸಾಹಧನವನ್ನು 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮುಖಾಂತರ ನೀಡಲಾಗುವುದು. ಪ್ರತಿ ಫಲಾನುಭವಿ ರೈತರಿಗೆ ಬಿತ್ತನೆ ಪ್ರದೇಶದಲ್ಲಿ ಗರಿಷ್ಠ ಎರಡು ಹೆಕ್ಟೇರ್‌ಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪ್ರತಿ ಹೆಕ್ಟೇರ್‌ ಸಿರಿಧಾನ್ಯಕ್ಕೆ 6,000 ಪ್ರೋತ್ಸಾಹಧನ ನೀಡಿದರೆ ಇನ್ನುಳಿದ 4,000 ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ನೀಡಲಿದೆ. ತಾಲ್ಲೂಕಿಗೆ ಸರ್ಕಾರ 9,271 ಹೆಕ್ಟೇರ್‌ ಬಿತ್ತನೆ ಗುರಿ ನಿಗದಿ ಮಾಡಿತ್ತು. ಆದರೆ, ಮುಂಗಾರು ಮಳೆ ಸಕಾಲಕ್ಕೆ ಬಾರದ ಕಾರಣ 8,725 ಹೆಕ್ಟೇರ್‌ ಸಾಧನೆಯಾಗಿದೆ. ರೈತಸಿರಿ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ತಾಲ್ಲೂಕಿನ 10,820 ರೈತರು ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ರಾಜ್ಯ ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಷನ್‌ ಸೆಂಟರ್‌ನವರು ಬಿಡುಗಡೆ ಮಾಡಿದ್ದ ರೈತಸಿರಿ ಮೊಬೈಲ್‌ ಆ್ಯಪ್‌ನಡಿ ಕೃಷಿ ಇಲಾಖೆಯವರು ಸಿರಿಧಾನ್ಯ ಬಿತ್ತನೆಯಾದ 30 ದಿನ ಹಾಗೂ ಬೆಳೆ ಕಟಾವು ಹಂತದಲ್ಲಿ ಒಮ್ಮೆ ಸೇರಿ 2 ಬಾರಿ ಸಮೀಕ್ಷೆ ಮಾಡಿದ್ದಾರೆ. ಒಟ್ಟು 9,420 ರೈತರ ಅರ್ಜಿಗಳು ಸ್ವೀಕೃತವಾಗಿದೆ.

‘ರೈತರಿಗೆ ಪ್ರೋತ್ಸಾಹಧನ ವಿತರಿಸಲು ಎರಡು ಹಂತದ ಸಮೀಕ್ಷೆಯ ಬೆಳೆ ಫೋಟೊ ಹಾಗೂ ಬೆಳೆಗಾರರ ಬ್ಯಾಂಕ್‌ ಖಾತೆ ಮಾಹಿತಿಯನ್ನು ರೈತಸಿರಿ ಮೊಬೈಲ್‌ ಆ್ಯಪ್‌ನಲ್ಲಿ ಕಳುಹಿಸಲಾಗಿದೆ. 20ರ ಒಳಗೆ ತಾಲ್ಲೂಕಿನ 9,420 ರೈತರ ಬ್ಯಾಂಕ್‌ ಖಾತೆಗೆ ಒಟ್ಟು 8.72 ಕೋಟಿಗೂ ಹೆಚ್ಚು ಹಣ ನೇರವಾಗಿ ಜಮಾ ಆಗುತ್ತದೆ’ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್‌. ಚಂದ್ರಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ 50,000 ಹೆಕ್ಟೇರ್‌ ಗುರಿ

ರಾಜ್ಯದಲ್ಲಿ 50,000 ಹೆಕ್ಟೇರ್‌ ಸಿರಿಧಾನ್ಯ ಬಿತ್ತನೆ ಗುರಿ ಇದ್ದು, ಚಿತ್ರದುರ್ಗ ಜಿಲ್ಲೆಯು ಅತಿ ಹೆಚ್ಚು 17,335 ಹೆಕ್ಟೇರ್‌ ಗುರಿ ಹೊಂದಿದೆ. ಜಿಲ್ಲೆಯ 6 ತಾಲ್ಲೂಕುಗಳ ಪೈಕಿ ಹೊಸದುರ್ಗ ತಾಲ್ಲೂಕು ಒಂದರಲ್ಲಿಯೇ 8,725 ಹೆಕ್ಟೇರ್‌ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.