ಸಿಬಿಐಗೆ ಆಂಧ್ರ ಬಾಗಿಲು ಬಂದ್‌

0
340

ಎನ್‌ಡಿಎ ಮೈತ್ರಿಕೂಟದಿಂದ ಇತ್ತೀಚೆಗೆ ಹೊರಗೆ ಬಂದು ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರದ ವಿರುದ್ಧ ಬಹಿರಂಗ ಸಮರಕ್ಕೆ ನಿಂತಿದ್ದಾರೆ. ಸಿಬಿಐಗೆ ಆಂಧ್ರ ಪ್ರದೇಶದ ಬಾಗಿಲು ಬಂದ್‌ ಮಾಡಿದ್ದಾರೆ.ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕೆ ಸಿಬಿಐಗೆ ನೀಡಲಾಗಿದ್ದ ‘ಮುಕ್ತ ಸಮ್ಮತಿ’ಯನ್ನು ಅಲ್ಲಿನ ಸರ್ಕಾರ ವಾಪಸ್‌ ಪಡೆದಿದೆ.

ಹೈದರಾಬಾದ್‌: ಎನ್‌ಡಿಎ ಮೈತ್ರಿಕೂಟದಿಂದ ಇತ್ತೀಚೆಗೆ ಹೊರಗೆ ಬಂದು ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರದ ವಿರುದ್ಧ ಬಹಿರಂಗ ಸಮರಕ್ಕೆ ನಿಂತಿದ್ದಾರೆ. ಸಿಬಿಐಗೆ ಆಂಧ್ರ ಪ್ರದೇಶದ ಬಾಗಿಲು ಬಂದ್‌ ಮಾಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕೆ ಸಿಬಿಐಗೆ ನೀಡಲಾಗಿದ್ದ ‘ಮುಕ್ತ ಸಮ್ಮತಿ’ಯನ್ನು ಅಲ್ಲಿನ ಸರ್ಕಾರ ವಾಪಸ್‌ ಪಡೆದಿದೆ. ರಾಜ್ಯದಲ್ಲಿ ತನಿಖೆ ನಡೆಸುವುದಕ್ಕೆ ಅವಿಭಜಿತ ಆಂಧ್ರ ಪ್ರದೇಶದ ಸರ್ಕಾರ ಸಮ್ಮತಿ ನೀಡಿತ್ತು. ಈಗ, ಹೊಸ ಆದೇಶದ ಮೂಲಕ ಸಿಬಿಐ ಅಧಿಕಾರಿಗಳು ರಾಜ್ಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. 

ದೆಹಲಿ ಪೊಲೀಸ್‌ ಕಾಯ್ದೆ ಪ್ರಕಾರ, ರಾಜ್ಯಗಳಲ್ಲಿ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇಲ್ಲ. ಹಾಗಾಗಿ ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕಾಗಿ ನೀಡಿದ್ದ ಸಮ್ಮತಿಯನ್ನು ಕಾಲ ಕಾಲಕ್ಕೆ ವಿಸ್ತರಿಸಲಾಗುತ್ತಿತ್ತು. 

ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧದ ಆರೋಪಗಳ ತನಿಖೆ ನಡೆಸುವ ಹೊಣೆಯನ್ನು ರಾಜ್ಯದ ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಬಿ) ಕೊಡಲಾಗಿದೆ. ಹಾಗಾಗಿ, ಆದಾಯ ತೆರಿಗೆ, ಅಂಚೆ, ಕೇಂದ್ರ ಎಕ್ಸೈಸ್‌ ಮತ್ತು ದೂರಸಂಪರ್ಕ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಎಸಿಬಿ ವ್ಯಾಪ್ತಿಗೆ ಬಂದಿದೆ. 

ಬಿಜೆಪಿ ಜತೆ ಟಿಡಿಪಿ ಸ್ನೇಹ ಕಡಿದುಕೊಂಡ ಬಳಿಕ ಆಂಧ್ರ ಪ್ರದೇಶದ ಹಲವು ಕಡೆ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದರು. ಟಿಡಿ‍ಪಿ ಮುಖಂಡರಿಗೆ ಹತ್ತಿರವಾಗಿರುವ ಹಲವು ಉದ್ಯಮಿಗಳಿಗೆ ಸೇರಿದ ಸ್ಥಳಗಳಲ್ಲಿಯೂ ತನಿಖೆ ನಡೆದಿತ್ತು. ರಾಜಕೀಯ ದ್ವೇಷ ಸಾಧನೆಗಾಗಿ ಸಿಬಿಐಯನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಟಿಡಿಪಿ ಆರೋಪಿಸಿದೆ. ‘ಆಪರೇಷನ್‌ ಗರುಡ’ ಎಂಬ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಸಿಬಿಐಯನ್ನು ಬಳಸಿಕೊಂಡು ನಾಯ್ಡು ಸರ್ಕಾರವನ್ನು ಕಿತ್ತೆಸೆಯುವುದು ಇದರ ಉದ್ದೇಶ ಎಂದು ಆಪಾದಿಸಲಾಗಿದೆ. 

ಸರ್ಕಾರದ ಕ್ರಮಕ್ಕೆ ಪ್ರಮುಖ ವಿರೋಧ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ. ಯಾವ ಕಾರಣಕ್ಕೆ ಸಿಬಿಐ ಮೇಲೆ ನಿರ್ಬಂಧ ಹೇರಲಾಗಿದೆ ಎಂಬುದನ್ನು ನಾಯ್ಡು ಅವರು ತಿಳಿಸಬೇಕು. ಸಿಬಿಐ ಬಗೆಗಿನ ಭಯವೇ ಈ ನಿರ್ಧಾರಕ್ಕೆ ಕಾರಣ ಎಂದೂ ವೈಎಸ್‌ಆರ್‌ ಕಾಂಗ್ರೆಸ್‌ ಆರೋಪಿಸಿದೆ. 

8ರಂದೇ ಸಮ್ಮತಿ ವಾಪಸ್‌: 1946ರ ದೆಹಲಿ ವಿಶೇಷ ಪೊಲೀಸ್‌ ಸಂಸ್ಥೆ ಕಾಯ್ದೆ ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ಈ ಕಾಯ್ದೆ ಪ್ರಕಾರ ದೆಹಲಿಯ ಹೊರಗೆ ತನಿಖೆ ನಡೆಸಲು ಆಯಾ ರಾಜ್ಯಗಳ ಅನುಮತಿ ಪಡೆದುಕೊಳ್ಳಬೇಕು. ಅದಕ್ಕಾಗಿ ರಾಜ್ಯಗಳು ಸಿಬಿಐಗೆ ‘ಮುಕ್ತ ಸಮ್ಮತಿ’ ನೀಡುತ್ತವೆ. ಇಂತಹ ಸಮ್ಮತಿಯನ್ನು ಆಂಧ್ರ ಪ್ರದೇಶ ಸರ್ಕಾರವು ಆಗಸ್ಟ್‌ 3ರಂದು ನವೀಕರಿಸಿತ್ತು. ಆದರೆ, ಇದೇ ನವೆಂಬರ್ 8ರಂದು ಈ ಸಮ್ಮತಿಯನ್ನು ವಾಪಸ್‌ ಪಡೆದು ಆದೇಶ ಹೊರಡಿಸಲಾಗಿದೆ. ಈಗ ಈ ಆದೇಶ ಬಹಿರಂಗವಾಗಿದೆ.