ಸಿದ್ಧ ಉಡುಪು ಕ್ಷೇತ್ರಕ್ಕೆ ಪತಂಜಲಿ

0
245

ಬಾಬಾ ರಾಮದೇವ್‌ ಒಡೆತನದ ಪತಂಜಲಿ ಆಯುರ್ವೇದ, ತ್ವರಿತವಾಗಿ ಬೆಳೆಯುತ್ತಿರುವ ಬ್ರ್ಯಾಂಡೆಡ್‌ ಸಿದ್ಧ ಉಡುಪು ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿದೆ.

ನವದೆಹಲಿ (ಪಿಟಿಐ): ಬಾಬಾ ರಾಮದೇವ್‌ ಒಡೆತನದ ಪತಂಜಲಿ ಆಯುರ್ವೇದ, ತ್ವರಿತವಾಗಿ ಬೆಳೆಯುತ್ತಿರುವ ಬ್ರ್ಯಾಂಡೆಡ್‌ ಸಿದ್ಧ ಉಡುಪು ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿದೆ.

ಈ ಸಿದ್ಧ ಉಡುಪುಗಳನ್ನು ‘ಪರಿಧನ್‌’ ಬ್ರ್ಯಾಂಡ್‌ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ 1,000 ಕೋಟಿ ವಹಿವಾಟು ನಡೆಸುವ ನಿರೀಕ್ಷೆ ಹೊಂದಿದೆ.

‘ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶದಾದ್ಯಂತ 100 ಮತ್ತು 2020ರ ಮಾರ್ಚ್‌ ವೇಳೆಗೆ 500 ಮಳಿಗೆಗಳನ್ನು ಆರಂಭಿಸಲು ಸಂಸ್ಥೆ ಉದ್ದೇಶಿಸಿದೆ. ಎಲ್ಲ ವಯೋಮಾನದವರ ಅಗತ್ಯಗಳನ್ನು ಈಡೇರಿಸಲು ಲಿವ್‌ಫಿಟ್‌ (ಕ್ರೀಡೆ ಮತ್ತು ಯೋಗ) ಆಸ್ತಾ (ಮಹಿಳೆ) ಮತ್ತು ಸಂಸ್ಕಾರ್ (ಪುರುಷ) ಬ್ರ್ಯಾಂಡ್‌ ಹೆಸರಿನಲ್ಲಿ ಈ ಸಿದ್ಧ ಉಡುಪುಗಳು ಲಭ್ಯ ಇರಲಿವೆ. ಮುಂದಿನ ವರ್ಷದಿಂದ ಆನ್‌ಲೈನ್‌ನಲ್ಲಿ ಲಭ್ಯ ಇರಲಿವೆ’ ಎಂದು ಬಾಬಾ ರಾಮದೇವ್‌ ಹೇಳಿದ್ದಾರೆ.

‘ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸ್ಪರ್ಧೆ ನೀಡುವುದು ನಮ್ಮ ಉದ್ದೇಶವಾಗಿದೆ. ‘ಪರಿಧನ್‌’ ಉತ್ಪನ್ನಗಳ ಬೆಲೆ ಇತರ ಉತ್ಪನ್ನಗಳಿಗೆ ಹೋಲಿಸಿದರೆ ಶೇ 30 ರಿಂದ ಶೇ 40 ಅಗ್ಗವಾಗಿರಲಿದ್ದು, ಜನಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗಿದೆ.

‘ಶೇ 10ರಷ್ಟಿರುವ ಬ್ರ್ಯಾಂಡೆಡ್‌ ವಲಯದಲ್ಲಿ ದೇಶಿ ಬ್ರ್ಯಾಂಡ್‌ಗಳ ಸಂಖ್ಯೆ ತುಂಬ ಕಡಿಮೆ ಇದೆ. ಜನ ಸಾಮಾನ್ಯರು ದೇಶಿ ಬ್ರ್ಯಾಂಡ್‌ನ ದಿರಿಸು ಧರಿಸಿ ಹೆಮ್ಮೆಪಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದರು.