ಸಿಜೆಐ ರಂಜನ್​ ಗೊಗೊಯ್​ ವಿರುದ್ಧದ ಲೈಂಗಿಕ ಕಿರುಕುಳ ದೂರು ವಜಾ: ಯಾವುದೇ ಸಾಕ್ಷಿಯಿಲ್ಲವೆಂದ ಆಂತರಿಕ ಸಮಿತಿ

0
20

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಯಾವುದೇ ಸೂಕ್ತ ಸಾಕ್ಷಿ ಇಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​ನ ಆಂತರಿಕ ಸಮಿತಿ ಸೋಮವಾರ ಹೇಳಿದ್ದು, ಈ ಮೂಲಕ ಸಿಜೆಐ ರಂಜನ್​ ಗೊಗೊಯ್​ ಅವರಿಗೆ ಕ್ಲೀನ್​ ಚಿಟ್​ ಸಿಕ್ಕಂತಾಗಿದೆ.

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಯಾವುದೇ ಸೂಕ್ತ ಸಾಕ್ಷಿ ಇಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​ನ ಆಂತರಿಕ ಸಮಿತಿ ಮೇ 6 ರ ಸೋಮವಾರ ಹೇಳಿದ್ದು, ಈ ಮೂಲಕ ಸಿಜೆಐ ರಂಜನ್​ ಗೊಗೊಯ್​ ಅವರಿಗೆ ಕ್ಲೀನ್​ ಚಿಟ್​ ಸಿಕ್ಕಂತಾಗಿದೆ.

ನ್ಯಾಯಾಲಯದ ಮಾಜಿ ಮಹಿಳಾ ಸಿಬ್ಬಂದಿಯೋರ್ವರು ಏ.19ರಂದು ಮುಖ್ಯನ್ಯಾಯಮೂರ್ತಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿ ದೂರು ನೀಡಿದ್ದರು. ಈ ದೂರಿನ ಬಗ್ಗೆ ವಿಚಾರಣೆ ನಡೆಸಲು ಮೂವರು ನ್ಯಾಯಾಧೀಶರನ್ನೊಳಗೊಂಡ ಸಮಿತಿ ರಚನೆಯಾಗಿತ್ತು. ದೂರು ನೀಡಿದ ಮರುದಿನವೇ ವಿಚಾರಣೆ ಎದುರಿಸಿದ ರಂಜನ್​ ಗೊಗೊಯಿ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದರು. ಇದೊಂದು ಪಿತೂರಿ. ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದರು.

ಹಂತಹಂತವಾಗಿ ವಿಚಾರಣೆ ನಡೆಸಿದ ಎಸ್​.ಎ.ಬಾಬ್ಡೆ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಆಂತರಿಕ ಸಮಿತಿ ಇಂದು ತಮ್ಮ ಕೊನೇ ತೀರ್ಪು ನೀಡಿದ್ದು, ರಂಜನ್​ ಗೊಗೊಯ್​ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಂತರಿಕ ಸಮಿತಿಯ ವರದಿಯನ್ನು ಸ್ವೀಕರಿಸಲು ಸಮರ್ಥರಾಗಿರುವ ಹಿರಿಯ ನ್ಯಾಯಾಧೀಶರಿಗೆ ನೀಡಲಾಗಿದೆ. ಹಾಗೇ ಅದರ ಒಂದು ಪ್ರತಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೂ ಕಳಿಸಲಾಗಿದೆ ಎಂದು ಸಮಿತಿ ತಿಳಿಸಿದೆ.