ಸಾವಯವ: ಈಶಾನ್ಯ ರಾಜ್ಯಕ್ಕೆ ವಿಶ್ವ ಮನ್ನಣೆ(‘ಸಿಕ್ಕಿಂ’ಗೆ ವಿಶ್ವಸಂಸ್ಥೆಯ ‘ಫ್ಯೂಚರ್ ಪಾಲಿಸಿ ಅವಾರ್ಡ್‌’ ಪ್ರದಾನ)

0
199

ಸಂಪೂರ್ಣ ಸಾವಯವ ಕೃಷಿಯನ್ನು ಸಾಧಿಸಿರುವ ಭಾರತದ ಈಶಾನ್ಯ ರಾಜ್ಯ ಸಿಕ್ಕಿಂಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್‌ಎಒ) ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ದೊರೆತಿದೆ.

ನ್ಯೂಯಾರ್ಕ್‌/ರೋಮ್‌ (ಪಿಟಿಐ): ಸಂಪೂರ್ಣ ಸಾವಯವ ಕೃಷಿಯನ್ನು ಸಾಧಿಸಿರುವ ಭಾರತದ ಈಶಾನ್ಯ ರಾಜ್ಯ ಸಿಕ್ಕಿಂಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್‌ಎಒ) ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ದೊರೆತಿದೆ.

ರೋಮ್‌ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ‘ಆಸ್ಕರ್‌ ಫಾರ್‌ ಫ್ಯೂಚರ್‌ ಪಾಲಿಸಿ ಅವಾರ್ಡ್‌–2018’ ಪ್ರದಾನ ಮಾಡಲಾಗಿದೆ. 

25 ರಾಷ್ಟ್ರಗಳ 51 ನೀತಿಗಳು ಈ ಸ್ಪರ್ಧೆಯಲ್ಲಿದ್ದವು. ಬ್ರೆಜಿಲ್‌, ಡೆನ್ಮಾರ್ಕ್‌ ಮತ್ತು ಕ್ವಿಟೊ (ಈಕ್ವೆಡಾರ್‌) ರಾಷ್ಟ್ರಗಳಿಗೆ ಬೆಳ್ಳಿ ಪದಕ ದೊರೆತಿದೆ.

ಸಿಕ್ಕಿಂ ಅಳವಡಿಸಿಕೊಂಡಿರುವ ಸುಸ್ಥಿರ ಆಹಾರ ವ್ಯವಸ್ಥೆ ಮತ್ತು ಕೃಷಿ ಪರಿಸರ ನೀತಿಗಳನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹಾಗೂ ವರ್ಲ್ಡ್‌ ಫ್ಯೂಚರ್ ಕೌನ್ಸಿಲ್ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತವೆ.

2009ರಲ್ಲಿ ಈ ಪ್ರಶಸ್ತಿ ಆರಂಭಿಸಲಾಯಿತು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಪೂರಕ ನೀತಿಗಳನ್ನು ಅಳವಡಿಸಿಕೊಂಡ ರಾಷ್ಟ್ರ, ರಾಜ್ಯ ಮತ್ತು ಸರ್ಕಾರಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಪ್ರಸಕ್ತ ಸಾಲಿನ ಪ್ರಶಸ್ತಿಗೆ ‘ಕೃಷಿ–ವಿಜ್ಞಾನ’ ಕ್ಷೇತ್ರವನ್ನು ಗುರುತಿಸಲಾಗಿತ್ತು. ಸಾವಯವಕ್ಕೆ ಉತ್ತೇಜನ ಮತ್ತು ಕೃಷಿ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸುವುದನ್ನು ಮಾನದಂಡವಾಗಿ ಪರಿಗಣಿಸಲಾಗಿತ್ತು.

ಈ ಎಲ್ಲಾ ಮಾನದಂಡಗಳನ್ನು ಪೂರೈಸಿದ ಕಾರಣ ‘ಫ್ಯೂಚರ್‌ ಪಾಲಿಸಿ ಅವಾರ್ಡ್‌’ ನೀಡಲಾಗಿದೆ.

ಸಾವಯವ ಕೃಷಿಯಿಂದ ಸಿಕ್ಕಿಂನಲ್ಲಿ ರೈತರ ಬೇಸಾಯದ ವೆಚ್ಚ ಕಡಿಮೆಯಾಗಿದೆ, ಇಳುವರಿಯೂ ಹೆಚ್ಚಿದೆ. ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳು ದೊರೆಯುತ್ತಿವೆ ಎಂದು ಸಮಿತಿ ಹೇಳಿದೆ.

# 2003  ರಲ್ಲಿ ಸಿಕ್ಕಿಂ ಸಂಪೂರ್ಣ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ವರ್ಷ

# 66,000 ಸಿಕ್ಕಿಂ ಕೃಷಿ ಕುಟುಂಬದ ಸಂಖ್ಯೆ

# 50% ಸಾವಯವ ರಾಜ್ಯವಾದ ನಂತರ ಪ್ರವಾಸಿಗರ 
ಸಂಖ್ಯೆಯಲ್ಲಿ ಏರಿಕೆ ಪ್ರಮಾಣ