ಸಾಲುಮರದ ತಿಮ್ಮಕ್ಕನಿಗೆ ಪದ್ಮಶ್ರೀ ಗರಿ

0
638

ಸಾಲುಮರದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿದ ಪರಿಸರವಾದಿ.

ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದವರು. ಅವರನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಇದೀಗ ಕೇಂದ್ರ ಸರ್ಕಾರದ 2019 ನೇ ಸಾಲಿನ ಪದ್ಮಶ್ರೀ ಪುರಸ್ಕಾರವು ಅವರನ್ನು ಅರಸಿ ಬಂದಿದೆ.

ರಾಮನಗರ: ಸಾಲುಮರದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿದ ಪರಿಸರವಾದಿ.

ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದವರು. ಅವರನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಇದೀಗ ಕೇಂದ್ರ ಸರ್ಕಾರದ  2019 ನೇ ಸಾಲಿನ ಪದ್ಮಶ್ರೀ ಪುರಸ್ಕಾರವು ಅವರನ್ನು ಅರಸಿ ಬಂದಿದೆ.

ತಿಮ್ಮಕ್ಕ ಹುಟ್ಟಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ. ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭಿಸಲಿಲ್ಲ. ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ನಂತರದಲ್ಲಿ ಮಾಗಡಿ ತಾಲ್ಲೂಕಿನ ಹುಲಿಕಲ್‌ ಗ್ರಾಮದ ಚಿಕ್ಕಯ್ಯ ಎಂಬುವರನ್ನು ಮದುವೆಯಾಗಿ ಗ್ರಾಮಕ್ಕೆ ಬಂದರು.

ಈ ದಂಪತಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು. ಕುದೂರಿನಿಂದ ಹುಲಿಕಲ್ ತನಕ ಇರುವ ರಾಜ್ಯ ಹೆದ್ದಾರಿಯಲ್ಲಿ ಈ ಮಾತೆ ನೆಟ್ಟು ಬೆಳೆಸಿದ ಆಲದ ಮರಗಳು ಕಾಣಸಿಗುತ್ತವೆ. ಅವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಪತಿ, ಪತ್ನಿ ಸಸಿಗಳಿಗೆ ನೀರುಣಿಸಲು ಬಿಂದಿಗೆಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಸಸಿಗಳಿಗೆ ಜಾನುವಾರುಗಳ ಕಾಟವನ್ನು ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದೆಸಿ ಕಾಪಾಡಿದರು. ಹೀಗೆ ಕಾಪಾಡಿದ ಮರಗಳು ಇಂದು ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ.

ತಿಮ್ಮಕ್ಕರ ಈ ಸಾಮಾಜಿಕ ಕಾರ್ಯವನ್ನು ವೆಚ್ಚಿ ಅವರನ್ನು ಸಂಘ–ಸಂಸ್ಥೆಗಳು ಗೌರವಿಸಿವೆ. ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ರಾಜ್ಯ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಮಾನ್ಯತೆಯ ಪ್ರಮಾಣ ಪತ್ರ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. 2016ರಲ್ಲಿ ಬಿಬಿಸಿ ವಾಹಿನಿಯು 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ತಿಮ್ಮಕ್ಕರಿಗೆ ಸ್ಥಾನ ನೀಡಿರುವುದು ಅವರ ಶ್ರಮಕ್ಕೆ ಹಿಡಿದ ಕನ್ನಡಿಯಂತೆ ಇದೆ.

ಇಷ್ಟೆಲ್ಲ ಸಾಧನೆ–ಪುರಸ್ಕಾರಗಳಿಗೆ ಒಳಗಾದರೂ ವೃದ್ಧಾಪ್ಯದ ದಿನಗಳಲ್ಲಿ ಜೀವನ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ತಿಂಗಳಿಗೆ ಇಂತಿಷ್ಟು ವೃದ್ಧಾಪ್ಯ ವೇತನ ಬಿಟ್ಟರೆ ಹೆಚ್ಚೇನು ನೆರವು ನೀಡಿಲ್ಲ. ಸದ್ಯ ದತ್ತು ಮಗ ಉಮೇಶ್‌ ಆಶ್ರಯದಲ್ಲಿ ಇರುವ ತಿಮ್ಮಕ್ಕ ಈಗಲೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅಲ್ಲಲ್ಲಿ ನಡೆಯುವ ಪರಿಸರ ಸ್ನೇಹಿ ಕಾರ್ಯಗಳಲ್ಲಿ ಭಾಗಿಯಾಗಿ ಯುವಜನರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ. ತಾವೇ ಸಸ್ಯ ನರ್ಸರಿಯನ್ನು ಮಾಡಿಕೊಂಡು ಸಾವಿರಾರು ಮಂದಿಗೆ ಗಿಡಗಳನ್ನು ವಿತರಿಸಿದ್ದಾರೆ. ಸಾವಿರಾರು ಉಪನ್ಯಾಸ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಸರ್ಕಾರಗಳಿಗೆ ಪ್ರೇರಣೆ: ತಿಮ್ಮಕ್ಕರ ಕಾರ್ಯವು ಕೇವಲ ಜನರಿಗಲ್ಲ, ಸರ್ಕಾರಗಳಿಗೂ ಪ್ರೇರಣೆ ಆಗಿದೆ. 2014–15ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ‘ಸಾಲುಮರದ ತಿಮ್ಮಕ್ಕನ ನೆರಳು ಯೋಜನೆ’ಯನ್ನು ಜಾರಿಗೊಳಿಸಿ ಸುಮಾರು 3 ಸಾವಿರ ಕಿ.ಮೀ. ಹೆದ್ದಾರಿಯ ಎರಡೂ ಬದಿಯಲ್ಲಿ ಗಿಡಗಳನ್ನು ಬಳೆಸುವ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು.