ಸಾಮಾಜಿಕ ಜಾಲ ತಾಣಗಳಾದ “ಟಿಕ್‌ಟಾಕ್‌” ಮತ್ತು “ಹೆಲೊಗೆ” ನೋಟಿಸ್‌

0
56

ಚೀನಾದ ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಟಿಕ್‌ಟಾಕ್‌ ಮತ್ತು ಹೆಲೊಗಳಿಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ.

ನವದೆಹಲಿ: ಚೀನಾದ ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಟಿಕ್‌ಟಾಕ್‌ ಮತ್ತು ಹೆಲೊಗಳಿಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ (ಎಸ್‌ಜೆಎಂ) ನೀಡಿದ ದೂರಿನ ಮೇರೆಗೆ ಈ ನೋಟಿಸ್‌ ನೀಡಲಾಗಿದೆ. ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಈ ತಾಣಗಳು ಬಳಕೆಯಾಗುತ್ತಿವೆ ಎಂದು ಆರೋಪಿಸಲಾಗಿದೆ. 

ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ನೋಟಿಸ್‌ ನೀಡಿದ್ದು ಪ್ರತಿಕ್ರಿಯೆ ನೀಡಲು ಇದೇ 22ರ ಗಡುವು ಕೊಡಲಾಗಿದೆ. ಅದರೊಳಗೆ ಪ್ರತಿಕ್ರಿಯೆ ನೀಡದೇ ಇದ್ದರೆ ಈ ಆ್ಯಪ್‌ಗಳ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನೂ ನೀಡಲಾಗಿದೆ. 

ಈ ಎರಡೂ ಆ್ಯಪ್‌ಗಳನ್ನು ದೇಶವಿರೋಧಿ ಮತ್ತು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಪ್ರಧಾನಿಯವರಿಗೆ ಎಸ್‌ಜೆಎಂ ಇತ್ತೀಚೆಗೆ ದೂರು ನೀಡಿತ್ತು. ಈ ಎರಡೂ ಆ್ಯಪ್‌ಗಳು ಚೀನಾದ ಅಂತರ್ಜಾಲ ಸಂಸ್ಥೆ ಬೈಟ್‌ಡಾನ್ಸ್‌ನ ಮಾಲೀಕತ್ವದ್ದಾಗಿದೆ. 

ಭಾರತವು ತಮ್ಮ ಅತ್ಯಂತ ಪ್ರಬಲ ಮಾರುಕಟ್ಟೆಯಾಗಿದ್ದು ಸರ್ಕಾರದ ಜತೆ ಸಹಕರಿಸುವುದಾಗಿ ಟಿಕ್‌ಟಾಕ್‌ ಮತ್ತು ಹೆಲೊ ತಾಣಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. 

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸೈಬರ್‌ ಕಾನೂನು ಮತ್ತು ಇ–ಭದ್ರತೆ ವಿಭಾಗವು ಸುದೀರ್ಘ ಪ್ರಶ್ನಾವಳಿಯನ್ನು ಜಾಲತಾಣ ಸಂಸ್ಥೆಗಳಿಗೆ ಕಳುಹಿಸಿದೆ. ಆ್ಯಪ್‌ ಮೂಲಕ ಅನಧಿಕೃತ ಮಾಹಿತಿ ಹಂಚಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಅದರಲ್ಲಿ ಸೇರಿದೆ.