‘ಸಾಕ್ಷಿಗಳ ರಕ್ಷಣಾ ಯೋಜನೆ’ ಜಾರಿಗೆ ಸುಪ್ರೀಂ ಆದೇಶ

0
696

ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ ‘ಸಾಕ್ಷಿಗಳ ರಕ್ಷಣಾ ಯೋಜನೆ’ ದೇಶಾದ್ಯಂತ ಜಾರಿಯಾಗುತ್ತಿದೆ. ಸಾಕ್ಷಿ

ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಸುಧಾರಣೆಗೆ ಒಂದೂವರೆ ದಶಕದ ಹಿಂದೆ ಕರ್ನಾಟಕದ ನ್ಯಾ.ವಿ.ಎಸ್‌.ಮಳೀಮಠ್‌ ಸಲ್ಲಿಸಿದ್ದ ವರದಿಯ ಪ್ರಮುಖ ಅಂಶವಾದ ‘ಸಾಕ್ಷಿಗಳ ರಕ್ಷಣಾ ಯೋಜನೆ’ ದೇಶಾದ್ಯಂತ ಜಾರಿಯಾಗುತ್ತಿದೆ. 

ಸುಪ್ರೀಂಕೋರ್ಟ್‌ ಇತ್ತೀಚೆಗೆ ಸಾಕ್ಷಿಗಳ ರಕ್ಷಣಾ ಯೋಜನೆ ಕುರಿತು ಕೇಂದ್ರ ಸರಕಾರ ಸಲ್ಲಿಸಿದ್ದ ಅಂತಿಮ ಕರಡನ್ನು ಅನುಮೋದಿಸಿದೆ. ಅಲ್ಲದೆ, ಸಂಸತ್‌ ಈ ಬಗ್ಗೆ ಕಾಯಿದೆ ರೂಪಿಸಿ ಅನುಷ್ಠಾನಗೊಳಿಸುವವರೆಗೆ ಕಾಯದೆ ರಾಜ್ಯಗಳು ಕೂಡಲೇ ಅದನ್ನು ಜಾರಿಗೊಳಿಸಬೇಕೆಂದು ಆದೇಶಿಸಿದೆ. ಈ ಕಾಯಿದೆಯಿಂದಾಗಿ ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯ ಹೇಳಲು ಹೆದರಬೇಕಾಗಿಲ್ಲ. ಬೆದರಿಕೆಗೆ ಮಣಿದು ಪ್ರತಿಕೂಲ ಸಾಕ್ಷ್ಯ ನುಡಿಯುವ ಅಗತ್ಯವಿಲ್ಲ. ಪ್ರತ್ಯಕ್ಷವಾಗಿ ಕಂಡದ್ದನ್ನು ಧೈರ್ಯವಾಗಿ ಹೇಳಬಹುದು. ಸಾಕ್ಷಿದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರಗಳದ್ದಾಗಿದೆ. ಸಾಕ್ಷಿಗಳಿಗೆ ರಕ್ಷಣೆ ಜತೆಗೆ ಆರ್ಥಿಕ ನೆರವೂ ನೀಡಬೇಕಿದೆ.

ಮಳೀಮಠ್‌ ವರದಿ ಹಿನ್ನೆಲೆ: 

2000ರಲ್ಲಿ ಆಗಿನ ಎನ್‌ಡಿಎ ಸರಕಾರ ಕ್ರಿಮಿನಲ್‌ ನ್ಯಾಯ ವ್ಯವಸ್ಥೆ ಸುಧಾರಣೆಗಾಗಿ ಕೇರಳ ಹೈಕೋರ್ಟ್‌ನ ಸಿಜೆ ಆಗಿದ್ದ ಕರ್ನಾಟಕದ ನ್ಯಾಯಮೂರ್ತಿ ವಿ.ಎಸ್‌.ಮಳೀಮಠ್‌ ನೇತೃತ್ವದ ಸಮಿತಿ ರಚನೆ ಮಾಡಿತ್ತು. ಅದು 2003ರಲ್ಲಿ 20 ಪ್ರಮುಖ ಅಂಶಗಳ ಬಗ್ಗೆ 158 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಅಂದಿನ ಉಪ ಪ್ರಧಾನಿ ಹಾಗೂ ಗೃಹ ಸಚಿವ ಎಲ್‌.ಕೆ.ಅಡ್ವಾಣಿ ಅವರಿಗೆ ನೀಡಿತ್ತು. ಸಮಿತಿ ಒಟ್ಟಾರೆ, ‘ಪ್ರಸ್ತುತ ನ್ಯಾಯದಾನ ವ್ಯವಸ್ಥೆ ಅರೋಪಿಗಳ ಪರವಾಗಿದೆ. ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದಕ್ಕೆ ಆದ್ಯತೆ ಇಲ್ಲ’ ಎಂದು ಹೇಳಿತ್ತು. 

ಭಾರತೀಯ ದಂಡ ಸಂಹಿತೆ (ಐಪಿಸಿ)ಕಾಯಿದೆ ಸೆಕ್ಷನ್‌ 195 ಪ್ರಕಾರ, ಸಾಕ್ಷಿಗಳು ತಮ್ಮ ರಕ್ಷಣೆಗೆ ಸಂಬಂಧಿಸಿದ ಅಧಿಕಾರಿಗಳಿಂದ ನೆರವು ಪಡೆದುಕೊಳ್ಳಲು ಅವಕಾಶವಿದೆ. ಆದರೆ ಅದರಲ್ಲಿ ಯಾವ್ಯಾವ ರೀತಿಯ ಸಹಾಯ, ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದ್ದರಿಂದ ಬಲಿಷ್ಠವಾದ ಸಾಕ್ಷಿಗಳ ರಕ್ಷಣಾ ವ್ಯವಸ್ಥೆ ರೂಪಿಸುವ ಅಗತ್ಯವಿದ್ದು, ನ್ಯಾಯಾಧೀಶರೇ ವಿಚಾರಣೆ ವೇಳೆ ಸಾಕ್ಷ್ಯಗಳ ಪರ ನಿಲ್ಲಬೇಕಾಗಿದೆ. ಅವರನ್ನು ಗೌರವಯುತವಾಗಿ ನಡೆಸಿಕೊಂಡು ಭತ್ಯೆಯನ್ನೂ ನೀಡಬೇಕು. ಅಮೆರಿಕ ಮಾದರಿಯಲ್ಲಿ ಪ್ರತ್ಯೇಕ ಸಾಕ್ಷಿಗಳ ರಕ್ಷಣಾ ಕಾನೂನು ರೂಪಿಸಬೇಕು’ ಎಂದು ಶಿಫಾರಸು ಮಾಡಿತ್ತು. 

ಕಾನೂನು ಆಯೋಗವೂ ತನ್ನ 198ನೇ ವರದಿಯಲ್ಲಿ ಇದೇ ಅಭಿಪ್ರಾಯವನ್ನು ಪ್ರತಿಪಾದಿಸಿತ್ತು. ನಾನಾ ಕಾರಣಗಳಿಂದಾಗಿ ಮಳೀಮಠ್‌ ವರದಿಯ ಶಿಫಾರಸು ಜಾರಿಗೊಂಡಿರಲಿಲ್ಲ.ಆದರೆ, ಆಸಾರಾಂ ಬಾಪು ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಕೆಲವು ಸಂತ್ರಸ್ತರು ಸಾಕ್ಷಿ ನುಡಿಯಲು ರಕ್ಷಣೆ ಕೋರಿ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌, ಕೇಂದ್ರ ಸರಕಾರದ ನಿಲುವು ಕೇಳಿತ್ತು. ಈಗ ಕೇಂದ್ರ ಸರಕಾರ ಸಾಕ್ಷಿಗಳ ರಕ್ಷಣಾ ಯೋಜನೆ ರೂಪಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.