ಸರ್ದಾರ್‌ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ ಶೂಟಿಂಗ್‌ : ಅಂಜುಮ್‌ ಮೌದ್ಗಿಲ್‌ ಗೆ ಚಿನ್ನ

0
17

ಪಂಜಾಬ್‌ನ ಅಂಜುಮ್‌ ಮೌದ್ಗಿಲ್‌ ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ವಿಭಾ ಗದಲ್ಲಿ ಜುಲೈ 29 ರ ಸೋಮವಾರ ವಿಶ್ವದಾಖಲೆಯ ಪಾಯಿಂಟ್‌ಗಳಿಗೆ ಗುರಿಯಿಟ್ಟು ಚಿನ್ನ ಗೆದ್ದರು.

ನವದೆಹಲಿ(ಪಿಟಿಐ): ಪಂಜಾಬ್‌ನ ಅಂಜುಮ್‌ ಮೌದ್ಗಿಲ್‌ ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ವಿಭಾ ಗದಲ್ಲಿ ಸೋಮವಾರ ವಿಶ್ವದಾಖಲೆಯ ಪಾಯಿಂಟ್‌ಗಳಿಗೆ ಗುರಿಯಿಟ್ಟು ಚಿನ್ನ ಗೆದ್ದರು. ಕರ್ಣಿ ಸಿಂಗ್‌ ರೇಂಜ್‌ನಲ್ಲಿ ನಡೆದ 12ನೇ ಸರ್ದಾರ್‌ ಸಜ್ಜನ್‌ಸಿಂಗ್‌ ಸೇಥಿ ಸ್ಮಾರಕ ಮಾಸ್ಟರ್ಸ್ ಶೂಟಿಂಗ್‌ ಸ್ಪರ್ಧೆಯಲ್ಲಿ ಅವರು ಈ ಸಾಮರ್ಥ್ಯ ತೋರಿದರು.

ಫೈನಲ್ಸ್‌ನಲ್ಲಿ ಅಂಜುಮ್‌ 253.9 ಪಾಯಿಂಟ್‌ ಗಳಿಸಿದರು. ಈ ಹಿಂದಿನ ದಾಖಲೆ ಅಪೂರ್ವಿ ಚಾಂಡೇಲ ಹೆಸರಲ್ಲಿದೆ. ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಿಶ್ವಕಪ್‌ ಹಂತದ ಸ್ಪರ್ಧೆಯಲ್ಲಿ ಅಪೂರ್ವಿ ಅವರು 252.9 ಪಾಯಿಂಟ್‌ ಗಳಿಸಿದ್ದರು.

ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಅಂಜುಮ್‌ ಅವರು 10 ಮೀಟರ್‌ ಏರ್‌ ರೈಫಲ್‌ ವಿಭಾಗದಲ್ಲಿ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಟಿಕೆಟ್‌ ಖಚಿತಪಡಿಸಿದ್ದಾರೆ. 
 
ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ನಲ್ಲಿ ಪಶ್ಚಿಮ ಬಂಗಾಳದ ಮೆಹುಲಿ ಘೋಷ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಪೂರ್ವಿ ಅವರ ದಾಖಲೆ ಸ್ಕೋರ್‌ಗಿಂತ ಕೇವಲ 0.7 ಕಡಿಮೆ ಪಾಯಿಂಟ್ಸ್‌ಗೆ ಮೆಹುಲಿ ಗುರಿಯಿಟ್ಟರು. ಜೂನಿಯರ್‌ ವಿಭಾಗದಲ್ಲಿ 253 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆಯುವಲ್ಲಿ ಮೆಹುಲಿ ಯಶಸ್ವಿಯಾದರು. ಏರ್‌ಪೋರ್ಸ್ ತಂಡದ ರವಿಕುಮಾರ್‌, ಪುರುಷರ 10 ಮೀಟರ್‌ ಏರ್‌ ರೈಫಲ್‌ ವಿಭಾಗದ ಚಿನ್ನ ಗೆದ್ದರು.