ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕ್‌ಗಳ ಉದ್ದೇಶಪೂರ್ವಕ ಸುಸ್ತಿದಾರರ ಹೆಸರು ಪ್ರಕಟಣೆ

0
346

ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕ್‌ಗಳು ತಮ್ಮ ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿವೆ.

ಬೆಂಗಳೂರು: ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕ್‌ಗಳು ತಮ್ಮ ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿವೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ಐಡಿಬಿಐ, ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಮತ್ತು ಸಿಂಡಿಕೇಟ್‌ ಬ್ಯಾಂಕ್‌ಗಳು ತಮ್ಮ ಒಟ್ಟು 1,814 ಮಂದಿ ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಪ್ರಕಟಿಸಿವೆ. ಈ ಎಲ್ಲ ಸುಸ್ತಿದಾರರು ಪಾವತಿಸಬೇಕಾಗಿರುವ ಒಟ್ಟಾರೆ ಸಾಲದ ಮೊತ್ತವು 41,716 ಕೋಟಿಗಳಷ್ಟಿದೆ.

ಈ ವಸೂಲಾಗದ ಸಾಲದ ಮೊತ್ತದ ಅರ್ಧದಷ್ಟು ಮೊತ್ತವು, ಪ್ರತಿಯೊಂದು ಬ್ಯಾಂಕ್‌ನ ಮೊದಲ ಹತ್ತು ಮಂದಿ ಸುಸ್ತಿದಾರರಿಗೆ ಸಂಬಂಧಿಸಿದೆ.

ಈ ನಾಲ್ಕು ಬ್ಯಾಂಕ್‌ಗಳ ಪೈಕಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಸುಸ್ತಿದಾರರು ಗರಿಷ್ಠ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಉದ್ದೇಶಪೂರ್ವಕ ಸುಸ್ತಿದಾರರ ಪೈಕಿ ‘ಪಿಎನ್‌ಬಿ’ ಮುಂಚೂಣಿಯಲ್ಲಿ ಇದೆ.

ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಮೆಹುಲ್‌ ಚೋಕ್ಸಿ, ಪಿಎನ್‌ಬಿಯ ಒಟ್ಟಾರೆ ಸಾಲದ ಶೇ 30.6ರಷ್ಟು ( 7,187 ಕೋಟಿ) ಬಾಕಿ ಉಳಿಸಿಕೊಂಡಿದ್ದಾನೆ. ಬ್ಯಾಂಕ್‌ಗಳ ಒಕ್ಕೂಟಕ್ಕೆ ಕೋಟ್ಯಂತರ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿರುವ ವಿಜಯ್‌ ಮಲ್ಯ,  597.44 ಕೋಟಿ ಸಾಲ ಮರುಪಾವತಿ ಮಾಡಬೇಕಾಗಿದೆ. ಮಲ್ಯ, ಐಡಿಬಿಐಗೆ 695.5 ಕೋಟಿ ಮತ್ತು ಬ್ಯಾಂಕ್‌ ಆಫ್‌ ಬರೋಡಾಗೆ  426.18 ಕೋಟಿ ಪಾವತಿಸಬೇಕಾಗಿದೆ.

ರೋಟೊಮ್ಯಾಕ್‌ನ ವಿಕ್ರಂ ಕೊಠಾರಿ, ಬ್ಯಾಂಕ್‌ ಆಫ್‌ ಬರೋಡಾದ ಅತಿದೊಡ್ಡ ಸುಸ್ತಿದಾರರಾಗಿದ್ದು, 456.6 ಕೋಟಿ ಪಾವತಿಸಬೇಕಾಗಿದೆ.

2017ರ ಸೆಪ್ಟೆಂಬರ್‌ ಅಂತ್ಯಕ್ಕೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು  9 ಸಾವಿರ ಖಾತೆಗಳನ್ನು ಉದ್ದೇಶಪೂರ್ವಕ ಸುಸ್ತಿದಾರರು ಎಂದು ವರ್ಗೀಕರಿಸಿವೆ.

ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಬಹಿರಂಗಪಡಿಸಲು ಕಾರಣವೇನು ಎಂದು ಮುಖ್ಯ ಮಾಹಿತಿ ಆಯುಕ್ತರು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ), ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಕೇಳಿದ್ದಾರೆ.

ಈ ನೋಟಿಸಿಗೆ ಉತ್ತರಿಸಲು ಈ ತಿಂಗಳ 26ರವರೆಗೆ ಕಾಲಾವಕಾಶ ನೀಡಬೇಕು ಎಂದು ಆರ್‌ಬಿಐ ಕೇಳಿಕೊಂಡಿದೆ.