ಸರ್ಕಾರಿ ಶಾಲೆ ಇದ್ದರೆ ಆರ್‌ಟಿಇ ಶುಲ್ಕ ಇಲ್ಲ

0
569

ಒಂದು ಕಿ.ಮೀ. ವ್ಯಾಪ್ತಿಯೊಳಗೆ ಸರ್ಕಾರಿ ಶಾಲೆಗಳು ಇದ್ದರೆ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ
ಯಡಿ ಖಾಸಗಿ ಶಾಲೆಗೆ ದಾಖಲಾದ ಮಕ್ಕಳ ಶುಲ್ಕವನ್ನು ಇನ್ನು ಮುಂದೆ ಸರ್ಕಾರ ಮರು ಪಾವತಿಸುವುದಿಲ್ಲ.

ಬೆಂಗಳೂರು: ಒಂದು ಕಿ.ಮೀ. ವ್ಯಾಪ್ತಿ ಯೊಳಗೆ ಸರ್ಕಾರಿ ಶಾಲೆಗಳು ಇದ್ದರೆ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಖಾಸಗಿ ಶಾಲೆಗೆ ದಾಖಲಾದ ಮಕ್ಕಳ ಶುಲ್ಕವನ್ನು ಇನ್ನು ಮುಂದೆ ಸರ್ಕಾರ ಮರು ಪಾವತಿಸುವುದಿಲ್ಲ. 

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ತಿದ್ದುಪಡಿ) 2018ಕ್ಕೆ ಡಿಸೆಂಬರ್ 5 ರ ಬುಧವಾರ ನಡೆದ ರಾಜ್ಯ ಸಚಿವ ಸಂಫುಟ ಅನುಮೋದನೆ ನೀಡಿದೆ. ಸರ್ಕಾರಿ ಶಾಲೆಗಳು ಇಲ್ಲದ ಕಡೆಗಳಷ್ಟೇ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಈಗಾಗಲೇ ಶಾಲೆಗೆ ಸೇರಿರುವ ಮಕ್ಕಳಿಗೆ ಹೊಸ ನಿಯಮ ಅನ್ವಯವಾಗುವುದಿಲ್ಲ ಎಂದು ಸಂಪುಟ ಸಭೆಯ ನಂತರ ಕಾನೂನು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಆರ್‌ಟಿಇ ತರಲಾಯಿತು. ಆದರೆ, ಸರ್ಕಾರಿ ಶಾಲೆ ಇದ್ದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ. ಹೀಗಾಗಿ, ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದರು.

‘ಆರ್‌ಟಿಇ ಕಾಯ್ದೆಯ ಮೂಲ ಉದ್ದೇಶವೇ ಇದು ಆಗಿತ್ತು. ರಾಜ್ಯ ಸರ್ಕಾರ ಈಗಲಾದರೂ ಅರ್ಥಮಾಡಿಕೊಂಡಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಜತೆಗೆ, ಅನುದಾನರಹಿತ ಶಾಲೆಗಳ ಕಡೆಗೂ ರಾಜ್ಯ ಸರ್ಕಾರ ಗಮನ ಹರಿಸಬೇಕು’ ಎಂದು ಅನುದಾನರಹಿತ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಒತ್ತಾಯಿಸಿದರು.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

ರಾಜ್ಯದ ಎಲ್ಲ ಸರ್ಕಾರಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿನಿಯರ ಶುಲ್ಕವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಪ್ರಸಕ್ತ ಸಾಲಿನಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಹೆಣ್ಣು ಮಕ್ಕಳ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.

‘ಪದವಿ ಹಾಗೂ ಸ್ನಾತಕೋತ್ತರ ಪದವಿಯ 1.84 ಲಕ್ಷ ಹಾಗೂ ಪದವಿಪೂರ್ವ ಕಾಲೇಜಿನ 1.33 ಲಕ್ಷ ವಿದ್ಯಾರ್ಥಿನಿಯರಿಗೆ ಇದರಿಂದ ಅನುಕೂಲವಾಗಲಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿನಿಯರಿಂದ ಶುಲ್ಕ ಪಡೆದಿರಲಿಲ್ಲ. ಹೀಗಾಗಿ, ಮರುಪಾವತಿ ಪ್ರಶ್ನೆ ಬರುವುದಿಲ್ಲ’ ಎಂದರು.