ಸಗಟು ಹಣದುಬ್ಬರ ಶೇ.5.13ಕ್ಕೆ ಏರಿಕೆ

0
271

ತೈಲ ಮತ್ತು ಆಹಾರ ಪದಾರ್ಥಗಳ ದರ ಏರಿಕೆಯಿಂದಾಗಿ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ(ಡಬ್ಲ್ಯುಪಿಐ) ಶೇ.5.13ಕ್ಕೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಇದು ಗರಿಷ್ಠ ಮಟ್ಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಅದು ಶೇ.3.14ರಷ್ಟಿತ್ತು. ಹಣದುಬ್ಬರ

ಹೊಸದಿಲ್ಲಿ: ತೈಲ ಮತ್ತು ಆಹಾರ ಪದಾರ್ಥಗಳ ದರ ಏರಿಕೆಯಿಂದಾಗಿ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ(ಡಬ್ಲ್ಯುಪಿಐ) ಶೇ.5.13ಕ್ಕೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಇದು ಗರಿಷ್ಠ ಮಟ್ಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಅದು ಶೇ.3.14ರಷ್ಟಿತ್ತು. 

ಅತಿ ಹೆಚ್ಚಿನ ಹಣದುಬ್ಬರವು ಜುಲೈನಲ್ಲಿ(ಶೇ.5.27) ದಾಖಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರುತ್ತಿರುವ ಕಚ್ಚಾ ತೈಲದ ದರದಿಂದಾಗಿ ದೇಶದಲ್ಲೂ ಇಂಧನ ದರಗಳು ಏರಿಕೆಯಾಗುತ್ತಿವೆ. ಅವು ಸೆಪ್ಟೆಂಬರ್‌ ತಿಂಗಳ ಹಣದುಬ್ಬರದಲ್ಲಿ ಗಣನೀಯ ಪಾತ್ರವಹಿಸಿವೆ. ಕಳೆದ ಆಗಸ್ಟ್‌ನಲ್ಲಿ ಸಗಟು ಹಣದುಬ್ಬರದ ಪ್ರಮಾಣ ಶೇ.4.53ರಷ್ಟಿತ್ತು. 

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೋಮವಾರ ಸಗಟು ಹಣದುಬ್ಬರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಇಂಧನ ಮತ್ತು ವಿದ್ಯುತ್‌ನ ಹಣದುಬ್ಬರ  ಸೆಪ್ಟೆಂಬರ್‌ನಲ್ಲಿ ಶೇ.16.65ಕ್ಕೆ ಏರಿದೆ. ಪೆಟ್ರೋಲ್‌ ಹಣದುಬ್ಬರ ಶೇ.17.21 ಮತ್ತು ಡೀಸೆಲ್‌ ಹಣದುಬ್ಬರ ಶೇ.22.18, ಎಲ್‌ಪಿಜಿ ಹಣದುಬ್ಬರ ಶೇ.33.51ರಷ್ಟು ಏರಿಕೆಯಾಗಿದೆ. 

”ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲದ ದರ ಸ್ವಲ್ಪ ತಗ್ಗಿದೆ. ಇಂಧನದ ಮೇಲಿನ ಅಬಕಾರಿ ಸುಂಕ ಮತ್ತು ವ್ಯಾಟ್‌ ಅನ್ನು ಕಡಿತಗೊಳಿಸಿರುವುದರಿಂದ ಇಂಧನ ದರ ತುಸು ತಗ್ಗಿದೆ. ಪ್ರಸಕ್ತ ತಿಂಗಳೂ ದುರ್ಬಲ ರೂಪಾಯಿಯು ಸಗಟು ಹಣದುಬ್ಬರ ಏರಿಕೆಗೆ ಕಾರಣವಾಗುವ ಸಾಧ್ಯತೆಗಳಿವೆ,” ಎಂದು ಐಸಿಆರ್‌ಎ ಪ್ರಧಾನ ವಿತ್ತತಜ್ಞ ಅದಿತಿ ನಾಯರ್‌ ಹೇಳಿದ್ದಾರೆ. 

 ”ಕಳೆದ 5 ತಿಂಗಳಿಂದಲೂ ಸಗಟು ಹಣದುಬ್ಬರವು ಶೇ.4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ. ಅದು ಕ್ರಮೇಣ ತಗ್ಗುವ ವಿಶ್ವಾಸವಿದೆ,” ಎಂದು ಇಂಡಿಯಾ ರೇಟಿಂಗ್‌ ಆ್ಯಂಡ್‌ ರೀಸರ್ಚ್‌ನ ಮುಖ್ಯ ವಿತ್ತತಜ್ಞ ಡಿ.ಕೆ.ಪಂತ್‌ ಹೇಳಿದ್ದಾರೆ. 

ಇತ್ತೀಚೆಗೆ ಬಿಡುಗಡೆಯಾಗಿದ್ದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು(ಐಐಪಿ) ಆಗಸ್ಟ್‌ನಲ್ಲಿ ಶೇ.4.3ಕ್ಕೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಉತ್ಪಾದನೆ ಪ್ರಮಾಣವು ಸೇ.4.8ರಷ್ಟಿತ್ತು. ಗಣಿಗಾರಿಕೆ ವಲಯದಲ್ಲಿನ ಉತ್ಪಾದನೆ ಕುಸಿತವು ಐಐಪಿ ಮೇಲೆ ಪ್ರಭಾವ ಬೀರಿದೆ. ಮತ್ತೊಂದು ಕಡೆ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ.3.77ಕ್ಕೆ ಏರಿಕೆಯಾಗಿದೆ. 

ರೂಪಾಯಿ ಅಪಮೌಲ್ಯ ಮತ್ತು ಹಣದುಬ್ಬರ ಏರಿಕೆಯ ನಿರೀಕ್ಷೆಯಿಂದಲೇ, ಆರ್‌ಬಿಐನ ನಾಲ್ಕನೇ ಹಣಕಾಸು ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಸ್ಥಿರವಾಗಿ ಇಡಲಾಗಿತ್ತು.