ಸಂಸ್ಕರಿತ ಹಾಲಿಗೂ ಇಲ್ಲ ಗುಣಮಟ್ಟ : ದೇಶದಾದ್ಯಂತ ಎಫ್‌ಎಸ್‌ಎಸ್‌ಎಐ ನಡೆಸಿದ ಅಧ್ಯಯನ ವರದಿಯಲ್ಲಿ ಬಹಿರಂಗ

0
28

ಕಚ್ಚಾ ಹಾಲಷ್ಟೇ ಅಲ್ಲ, ಭಾರತದಲ್ಲಿ ಕೆಲವು ಹೆಸರಾಂತ ಕಂಪನಿಗಳು ಮಾರಾಟ ಮಾಡುವ ಸಂಸ್ಕರಿತ ಹಾಲು ಸಹ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ನಿಗದಿಪಡಿಸಿದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ನವದೆಹಲಿ (ಪಿಟಿಐ): ಕಚ್ಚಾ ಹಾಲಷ್ಟೇ ಅಲ್ಲ, ಭಾರತದಲ್ಲಿ ಕೆಲವು ಹೆಸರಾಂತ ಕಂಪನಿಗಳು ಮಾರಾಟ ಮಾಡುವ ಸಂಸ್ಕರಿತ ಹಾಲು ಸಹ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ನಿಗದಿಪಡಿಸಿದ ಗುಣಮಟ್ಟವನ್ನುಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಈ ಬಗ್ಗೆ ನಡೆಸಲಾದ ಅಧ್ಯಯನದ ವರದಿಯನ್ನು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್‌ ಅಗರ್ವಾಲ್‌ ಅಕ್ಟೋಬರ್ 18 ರ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ‘ಪರೀಕ್ಷೆಗೆ ಒಳಪಡಿಸಿದ್ದ ಒಟ್ಟಾರೆ ಸಂಸ್ಕರಿತ ಹಾಲಿನ ಮಾದರಿಗಳಲ್ಲಿ ಶೇ 37.7ರಷ್ಟು ಮಾದರಿಗಳು ನಿಗದಿತ ಗುಣಮಟ್ಟದಲ್ಲಿ ಇರಲಿಲ್ಲ. ಸುರಕ್ಷತೆಯ ಮಾನದಂಡದಲ್ಲಿ ಸಂಸ್ಕರಿತ ಹಾಲಿಗಿಂತ ಕಚ್ಚಾ ಹಾಲು ಉತ್ತಮ. ಸಂಸ್ಕರಿತ ಹಾಲಿನ ಶೇ 10.4ರಷ್ಟು ಮತ್ತು ಕಚ್ಚಾ ಹಾಲಿನ ಶೇ 4.8ರಷ್ಟು ಸುರಕ್ಷತೆಯ ಮಾನದಂಡಕ್ಕೆ ಅನುಗುಣವಾಗಿ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

2018ರ ಮೇ– ಅಕ್ಟೋಬರ್‌ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟಾರೆ 1,103 ಪಟ್ಟಣಗಳಿಂದ ಹಾಲಿನ 6,432 ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಸ್‌ಎಐ ಗುಣಮಟ್ಟ ಪರೀಕ್ಷೆ ನಡೆಸಿತ್ತು. ಇದರಲ್ಲಿ ಶೇ 40.5ರಷ್ಟು ಸಂಸ್ಕರಿತ ಹಾಲಾಗಿದ್ದರೆ ಉಳಿದವು ಕಚ್ಚಾ ಹಾಲಿನ ಮಾದರಿಗಳಾಗಿದ್ದವು.

‘ದೇಶದಲ್ಲಿ ಇದೇ ಮೊದಲಬಾರಿಗೆ ಇಂಥ ವಿಸ್ತೃತ ಅಧ್ಯಯನ ನಡೆಸಲಾಗಿದೆ. ಹಾಲಿನಲ್ಲಿ ಇಂಥ ಮಲಿನಕಾರಕ ಅಂಶಗಳ ಪ್ರಮಾಣ ಪರೀಕ್ಷೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಇಂಥ ಯಂತ್ರಗಳ ಖರೀದಿಗೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಅಗರ್ವಾಲ್‌ ತಿಳಿಸಿದರು.

‘ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಿರೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನಿಡಿದ ಅವರು, ‘ಅವರು ನಮ್ಮ ಅಧ್ಯಯನದ ವರದಿಯನ್ನು ಒಪ್ಪದಿರಬಹುದು, ನ್ಯಾಯಾಲಯದಲ್ಲಿ ನಮ್ಮನ್ನು ಪ್ರಶ್ನಿಸಬಹುದು. ಆದರೆ ನಾವು ನಿಗದಿಮಾಡಿದ ಮಾನದಂಡಗಳನ್ನು ಕಾಯ್ದುಕೊಳ್ಳಲೇಬೇಕು’ ಎಂದರು.

ಕ್ರಮಕ್ಕೆ ಸೂಚನೆ: ಹಾಲಿನ ಗುಣಮಟ್ಟ ಕಾಪಾಡುವ ಸಲುವಾಗಿ ಸಂಘಟಿತ ಡೇರಿ ವಲಯದಲ್ಲಿ 2020ರ ಜನವರಿ 1ರಿಂದ ಜಾರಿಯಾಗುವಂತೆ ಕಡ್ಡಾ
ಯವಾಗಿ ‘ಗುಣಮಟ್ಟ ಪರೀಕ್ಷೆ ಹಾಗೂ ಪರಿಶೀಲನಾ ವ್ಯವಸ್ಥೆ’ ಜಾರಿಮಾಡಬೇಕು ಎಂದು  ಎಫ್‌ಎಸ್‌ಎಸ್‌ಎಐ ಸೂಚಿಸಿದೆ.

ಸಂಘಟಿತ ಕ್ಷೇತ್ರದಲ್ಲಿ 6ರಿಂದ 8 ತಿಂಗಳೊಳಗೆ ಈ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳು ನಡೆದಿರಬೇಕು ಎಂದೂ ಸೂಚನೆ ನೀಡಲಾಗಿದೆ.

ಮಾಲಿನ್ಯ ಅಪಾಯಕಾರಿ: ‘ಹಾಲಿನಲ್ಲಿ ಕಲಬೆರಕೆ ಮಾಡಲಾಗುತ್ತದೆ ಎಂಬ ಭಾವನೆ ಜನರಲ್ಲಿ ಹೆಚ್ಚಾಗಿದೆ. ಆದರೆ ಕಲಬೆರಕೆಗಿಂತ ಮಾಲಿನ್ಯವೇ ಹೆಚ್ಚು ಗಂಭೀರ ಸಮಸ್ಯೆಯಾಗಿದೆ’ ಎಂದು ಅಗರ್ವಾಲ್‌ ಹೇಳಿದ್ದಾರೆ.

ಹೆಸರಾಂತ ಕಂಪನಿಗಳು ಮಾರಾಟ ಮಾಡುವ ಸಂಸ್ಕರಿತ ಹಾಲೂ ಮಲಿನವಾಗಿದೆ ಎಂಬುದು ಆತಂಕಕಾರಿ. ಕೆಲವು ಕಂಪನಿಗಳ ಸಂಸ್ಕರಿತ ಹಾಲಿನಲ್ಲಿ ಅಫ್ಲಾಟಾಕ್ಸಿನ್‌–ಎಂ1, ಆ್ಯಂಟಿಬಯಾಟಿಕ್‌ ಹಾಗೂ ಕೀಟನಾಶಕದ ಅಂಶಗಳು ಪತ್ತೆಯಾಗಿವೆ. ಕಚ್ಚಾ ಹಾಲಿಗಿಂತ ಸಂಸ್ಕರಿತ ಹಾಲಿನಲ್ಲೇ ಇವು ಹೆಚ್ಚಾಗಿ ಕಾಣಿಸಿವೆ.

ಹಾಲಿನಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆ

# ಅತಿ ಹೆಚ್ಚು ‘ಅಫ್ಲಾಟಾಕ್ಸಿನ್‌’ಯುಕ್ತ ಸಂಸ್ಕರಿತ ಹಾಲು ಪತ್ತೆಯಾದ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ದೆಹಲಿ ಮತ್ತು ಕೇರಳ ಇವೆ. ಇದು ಕ್ಯಾನ್ಸರ್‌ಕಾರಕ ರಾಸಾಯನಿಕ

#  ಶೇ 12ರಷ್ಟು ಹಾಲಿನಲ್ಲಿ ಮಾತ್ರ ಕಲಬೆರಕೆ ಕಂಡುಬಂದಿದೆ. ತೆಲಂಗಾಣದಲ್ಲಿ ಗರಿಷ್ಠ ಹಾಗೂ ನಂತರ ಕ್ರಮವಾಗಿ ಮಧ್ಯಪ್ರದೇಶ ಮತ್ತು ಕೇರಳದಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಹೆಚ್ಚು ಕಲಬೆರಕೆ ಪತ್ತೆ

ಮೇವು ಹಾಗೂ ಪಶು ಆಹಾರಗಳ ಮೂಲಕ ಅಫ್ಲಾಟಾಕ್ಸಿನ್‌ ಹಸುವಿನ ದೇಹದೊಳಗೆ ಸೇರಿ ಹಾಲಿನಲ್ಲೂ ಅದು ಸೇರ್ಪಡೆಯಾಗುತ್ತದೆ. ಪಶು ಆಹಾರ ಹಾಗೂ ಮೇವಿನ ಗುಣಮಟ್ಟ ನಿಯಂತ್ರಣಕ್ಕೆ ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ

# ಶೇ 37.7ರಷ್ಟು ಸಂಸ್ಕರಿತ ಹಾಲಿನಲ್ಲಿ ಕೊಬ್ಬು, ಎನ್‌ಎಸ್‌ಎಫ್‌ (ಕೊಬ್ಬುಯೇತರ ಘನ ಅಂಶಗಳು), ಮಾಲ್ಟೊಡೆಕ್ಸ್ಟರಿನ್‌ ಹಾಗೂ ಸಕ್ಕರೆಯ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿತ್ತು.

# ಗುಣಮಟ್ಟ ಕಾಪಾಡುವ ವಿಚಾರದಲ್ಲಿ ಕಚ್ಚಾ ಹಾಲು ಇನ್ನೂ ಹಿಂದೆ ಬಿದ್ದಿದೆ. ಶೇ 47ರಷ್ಟು (3,825 ಮಾದರಿಗಳಲ್ಲಿ) ಮಾದರಿಗಳಲ್ಲಿ ನಿಗದಿತ ಗುಣಮಟ್ಟ ಇರಲಿಲ್ಲ

# ಕಚ್ಚಾ ಹಾಲಿನಲ್ಲೂ ನಿಗದಿತ ಮಾನದಂಡ ಕಾಯ್ದುಕೊಳ್ಳುವ ಸಲುವಾಗಿ ಗುಣಮಟ್ಟದ ಮೇವು ಹಾಗೂ ಪಶು ಆಹಾರ ಬಳಸುವಂತೆ ರಾಜ್ಯ ಸರ್ಕಾರಗಳು ಹಾಲು ಉತ್ಪಾದಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ