ಸಂಶೋಧಕರಿಗೆ ಐಐಎಸ್‌ಸಿಯೇ ಮೆಚ್ಚು (ಪ್ರಧಾನಮಂತ್ರಿ ಸಂಶೋಧನಾ ಫೆಲೊ ಯೋಜನೆಯಡಿ 50 ವಿದ್ಯಾರ್ಥಿಗಳಿಂದ ಅಧ್ಯಯನ)

0
20

ಬಹಳಷ್ಟು ಸಂಶೋಧನಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯೇ (ಐಐಎಸ್‌ಸಿ) ಮೊದಲ ಆಯ್ಕೆಯಾಗಿದೆ. ಪ್ರಧಾನಮಂತ್ರಿ ಸಂಶೋಧನಾ ಫೆಲೊ ಯೋಜನೆಗೆ (ಪಿಎಂಆರ್‌ಎಫ್) ಆಯ್ಕೆಯಾದ 119 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗಳು ಐಐಎಸ್‌ಸಿಯಲ್ಲಿ ಪಿಎಚ್‌.ಡಿ ಪಡೆಯಲು ಮುಂದಾಗಿದ್ದಾರೆ.

ನವದೆಹಲಿ: ಬಹಳಷ್ಟು ಸಂಶೋಧನಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯೇ (ಐಐಎಸ್‌ಸಿ)  ಮೊದಲ ಆಯ್ಕೆಯಾಗಿದೆ. ಪ್ರಧಾನಮಂತ್ರಿ ಸಂಶೋಧನಾ ಫೆಲೊ ಯೋಜನೆಗೆ (ಪಿಎಂಆರ್‌ಎಫ್) ಆಯ್ಕೆಯಾದ 119 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗಳು ಐಐಎಸ್‌ಸಿಯಲ್ಲಿ ಪಿಎಚ್‌.ಡಿ ಪಡೆಯಲು ಮುಂದಾಗಿದ್ದಾರೆ. 

50ರ ಪೈಕಿ 10 ಮಂದಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಅಂತರ್‌ ಶಿಸ್ತೀಯ ಪಿಎಚ್‌.ಡಿ ಅಧ್ಯಯನ ಮಾಡಲಿದ್ದಾರೆ. ಏಳು ಮಂದಿ ರಸಾಯನ ವಿಜ್ಞಾನ, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ತಲಾ ಐದು ಮಂದಿ, ಸಿವಿಲ್ ಎಂಜಿನಿಯರಿಂಗ್ ಮತ್ತು ಭೌತಶಾಸ್ತ್ರದಲ್ಲಿ ತಲಾ ನಾಲ್ವರು, ಏರೋಸ್ಪೇಸ್ ಎಂಜಿನಿಯ
ರಿಂಗ್, ಬಯಾಲಜಿಕಲ್ ಸೈನ್ಸ್ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ ಮೂವರು, ಗಣಿತಶಾಸ್ತ್ರ ಮತ್ತು ಕೆಮಿಕಲ್ ಎಂಜಿನಿಯರಿಂಗ್‌, ಮೆಟೀರಿಯಲ್ ಸೈನ್ಸ್, ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ತಲಾ ಇಬ್ಬರು ಸಂಶೋಧನೆ ಕೈಗೊಳ್ಳಲಿದ್ದಾರೆ.

1909ರಲ್ಲಿ ಸ್ಥಾಪನೆಯಾದ ಐಐಎಸ್‌ಸಿ, ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ದೇಶದಲ್ಲೇ ಹೆಸರುವಾಸಿ. 

 ಬ್ರಿಟನ್ ಮೂಲದ ಕ್ವಾಕ್ವರೆಲ್ಲಿ ಸೈಮಂಡ್ಸ್ (ಕ್ಯೂಎಸ್‌) ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿಯು ಇತ್ತೀಚೆಗೆ ಪ್ರಕಟಿಸಿದ 200 ಜಾಗತಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್‌ಸಿ 170ನೇ ಸ್ಥಾನ ಪಡೆದಿತ್ತು. ಭಾರತದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆ ಹಾಗೂ ಶಿಕ್ಷಣ ನೀಡುವಲ್ಲಿ ಐಐಎಸ್‌ಸಿ ಪ್ರಧಾನ ಸಂಸ್ಥೆಯಾಗಿದೆ ಎಂದು ಕ್ಯೂಎಸ್‌ ಅಭಿಪ್ರಾಯಪಟ್ಟಿತ್ತು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯ ಆದ್ಯತೆಯ ವಿಷಯಗಳಿಗೆ ಒತ್ತು ನೀಡಿ ಸಂಶೋಧನೆ ನಡೆಸಲು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಮಾನವ ಸಂಪನ್ಮೂಲ ಸಚಿವಾಲಯವು ಕಳೆದ ಫೆಬ್ರುವರಿಯಲ್ಲಿ ವಿಶೇಷ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಿತ್ತು. ಐಐಎಸ್‌ಸಿ, ಐಐಟಿ, ಎನ್‌ಐಟಿ, ಐಐಐಟಿ ಮತ್ತು ಐಐಎಸ್‌ಇಆರ್‌ ಸಂಸ್ಥೆಗಳಲ್ಲಿ ಪಿಎಚ್‌.ಡಿ ಮಾಡಲು ಅವಕಾಶ ನೀಡಲಾಗಿತ್ತು. 

24 ವಿದ್ಯಾರ್ಥಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಅಂತರ್‌ಶಿಸ್ತೀಯ ಪಿಎಚ್‌.ಡಿ ಕಾರ್ಯಕ್ರಮಗಳಿಗೆ ಆಯ್ಕೆಯಾಗಿದ್ದಾರೆ. ಐಐಎಸ್‌ಸಿ, ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಖರಗಪುರ, ಐಐಎಸ್‌ಇಆರ್ ಪುಣೆಯಲ್ಲಿ ಪಿಎಚ್‌.ಡಿ ಮಾಡಲು ಅವಕಾಶವಿದೆ. 24ರ ಪೈಕಿ 10 ವಿದ್ಯಾರ್ಥಿಗಳು ಬೆಂಗಳೂರಿನ ಐಐಎಸ್‌ಸಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅತಿಹೆಚ್ಚು ಅನುದಾನ

ಸರ್ಕಾರದ ಬೇರಾವುದೇ ಫೆಲೋಶಿಪ್‌ಗಿಂತ ಹೆಚ್ಚಿನ ಸಂಶೋಧನಾ ಅನುದಾನವು ಪಿಎಂಆರ್‌ಎಫ್ ಯೋಜನೆಯಡಿ ಲಭ್ಯವಿದೆ. ಒಬ್ಬ ವಿದ್ಯಾರ್ಥಿಗೆ ತಿಂಗಳಿಗೆ 70,000 ದಿಂದ 80,000ದ ಜೊತೆಗೆ ವರ್ಷಕ್ಕೆ 2 ಲಕ್ಷದಂತೆ ಐದು ವರ್ಷ ಸಂಶೋಧನಾ ಅನುದಾನ ದೊರೆಯುತ್ತದೆ. ವಿದ್ಯಾರ್ಥಿಗಳ ವಲಯದಲ್ಲಿ ಇದು ಜನಪ್ರಿಯ ಯೋಜನೆಯಾಗಿದ್ದರೂ, ಇದಕ್ಕೆ ಅರ್ಹತೆ ಪಡೆಯುವವರ ಸಂಖ್ಯೆ ಕಡಿಮೆ. 

2021ರೊಳಗೆ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ ಯೋಜನೆಯ ಅನುಕೂಲ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಹೆಚ್ಚು  ವಿದ್ಯಾರ್ಥಿಗಳು ಯೋಜನೆಯ ಲಾಭ ಪಡೆಯುವಂತಾಗಲು ಅವರನ್ನು ಸಜ್ಜುಗೊಳಿಸುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಇತ್ತೀಚೆಗೆ ಸೂಚನೆ ನೀಡಿತ್ತು.