ಶ್ರೀಶಾಂತ್‌ ನಿಷೇಧ ಏಳು ವರ್ಷಕ್ಕೆಇಳಿಕೆ

0
25

ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿದ್ದಭಾರತ ತಂಡದ ವೇಗದ ಬೌಲರ್‌ ಶಾಂತಕುಮಾರನ್‌ ಶ್ರೀಶಾಂತ್‌ ಅವರ ನಿಷೇಧ ಶಿಕ್ಷೆಯನ್ನು ಏಳು ವರ್ಷಗಳಿಗೆ ಇಳಿಸಲಾಗಿದೆ.

ಮುಂಬೈ (ರಾಯಿಟರ್ಸ್‌): ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿದ್ದ ಭಾರತ ತಂಡದ ವೇಗದ ಬೌಲರ್‌ ಶಾಂತಕುಮಾರನ್‌ ಶ್ರೀಶಾಂತ್‌ ಅವರ ನಿಷೇಧ ಶಿಕ್ಷೆಯನ್ನು ಏಳು ವರ್ಷಗಳಿಗೆ ಇಳಿಸಲಾಗಿದೆ. ಅವರ ನಿಷೇಧ ಶಿಕ್ಷೆ ಮುಂದಿನ ವರ್ಷದ ಆಗಸ್ಟ್‌ನಲ್ಲಿ ಕೊನೆಗೊಳ್ಳಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಿಳಿಸಿದೆ.

ಶ್ರೀಶಾಂತ್‌ ಮೇಲೆ ಹೇರಿದ್ದ ಅಜೀವ ನಿಷೇಧ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿ, ನಿಷೇಧ ಅವಧಿಯನ್ನು ಪುನರ್‌ಪರಿಶೀಲಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.

ಶ್ರೀಶಾಂತ್‌ ಅವರು ಯಾವುದೇ ವಾಣಿಜ್ಯ ಕ್ರಿಕೆಟ್‌ ಚಟುವಟಿಕೆಯಲ್ಲಿ ಅಥವಾ ಬಿಸಿಸಿಐ ಅಥವಾ ಅಂಗಸಂಸ್ಥೆಗಳ ಚಟುವಟಿಕೆಯಲ್ಲಿ ತೊಡಗದಂತೆ ಏಳು ವರ್ಷಗಳ ನಿಷೇಧ ಹೇರಲಾಗುತ್ತಿದೆ. ನಿಷೇಧ ಶಿಕ್ಷೆ 2013ರ ಸೆಪ್ಟಂಬರ್. 13ರಿಂದ ಪೂರ್ವಾನ್ವಯವಾಗಿದೆ ಎಂದು ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಶಾಂತ್‌ ಜೊತೆ ಅವರು ಆಡುತ್ತಿದ್ದ ರಾಜಸ್ತಾನ್‌ ರಾಯಲ್ಸ್‌ ಸಹ ಆಟಗಾರರಾದ ಅಜಿತ್‌ ಚಾಂಡಿಲಾ ಮತ್ತು ಅಂಕಿತ್‌ ಚವಾಣ್‌ ಅವರನ್ನು ದೆಹಲಿ ಪೊಲೀಸರು ಐಪಿಎಲ್‌ ಆರನೇ ಆವೃತ್ತಿಯಲ್ಲಿ ನಡೆದಿತ್ತೆನ್ನಲಾದ ಸ್ಪಾಟ್‌ ಫಿಕ್ಸಿಂಗ್‌ ಹಗರಣಕ್ಕೆ ಸಂಬಂಧಿಸಿ 2013ರ ಮೇ ತಿಂಗಳಲ್ಲಿ ಬಂಧಿಸಿದ್ದರು. ನಂತರ ಬಿಸಿಸಿಐ ಈ ಆಟಗಾರರ ವಿರುದ್ಧ ಕ್ರಮ ಕೈಗೊಂಡಿತ್ತು. ತಮ್ಮ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು ಎಂದು ಶ್ರೀಶಾಂತ್‌ ಹೇಳುತ್ತ ಬಂದಿದ್ದರು.
 
36 ವರ್ಷದ ಕೇರಳದ ಈ ಬೌಲರ್‌, ರಾಷ್ಟ್ರೀಯ ತಂಡಕ್ಕೆ 27 ಟೆಸ್ಟ್‌ ಪಂದ್ಯಗಳ ಜೊತೆ 53 ಏಕದಿನ ಹಾಗೂ 10 ಟಿ–20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 169 ವಿಕೆಟ್‌ಗಳನ್ನು ಪಡೆದಿದ್ದಾರೆ.