ಶ್ರೀಲಂಕಾ: ರಾಜಪಕ್ಸೆಗೆ ಪಟ್ಟ

0
275

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಶುಕ್ರವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿದ್ದಾರೆ.ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ.

ಕೊಲಂಬೊ (ಪಿಟಿಐ): ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಅಕ್ಟೋಬರ್ 26 ರ  ಶುಕ್ರವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿದ್ದಾರೆ.

ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ.   ರಾಜಪಕ್ಸೆ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದ ದೃಶ್ಯಗಳನ್ನು ಅವರಿಗೆ ನಿಷ್ಠವಾಗಿರುವ ಟೆವಿ ವಾಹಿನಿಯೊಂದು ಪ್ರಸಾರ ಮಾಡಿದೆ.

ವಿಕ್ರಮಸಿಂಘೆ ಅವರ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ (ಯುಎನ್‌ಪಿ) ಜತೆಗಿನ ಮೈತ್ರಿಯಿಂದ ಯುನೈಟೆಡ್ ಪೀಪಲ್ಸ್‌ ಫ್ರೀಡಂ ಅಲೈಯನ್ಸ್‌ (ಯುಪಿಎಫ್‌ಎ) ಪಕ್ಷವು ಹೊರಕ್ಕೆ ಬಂದಿದೆ. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮಹಿಂದ ಅಮರವೀರ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮಿರರ್‌ ದೈನಿಕ ವರದಿ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ, ಮೈತ್ರಿಪಾಲ ಸಿರಿಸೇನ ಅವರು ನೂತನ ಪ್ರಧಾನಿಯನ್ನು ನೇಮಕ ಮಾಡಿದ್ದಾರೆ.

2015ರಲ್ಲಿ ಸಿರಿಸೇನ ಅವರು ವಿಕ್ರಮಸಿಂಘೆ ಅವರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ದಶಕದ ಅವಧಿಯ ರಾಜಪಕ್ಸೆ ಆಡಳಿತ ಆಗ ಕೊನೆಗೊಂಡಿತ್ತು. ಕಳೆದ ಫೆಬ್ರುವರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಪಕ್ಸೆ ನೇತೃತ್ವದ ನೂತನ ಪಕ್ಷ ಎಸ್‌ಎಲ್‌ಎಫ್‌ಪಿ ಭರ್ಜರಿ  ಜಯ ಸಾಧಿಸಿತ್ತು. ಇದರಿಂದಾಗಿ ಮೈತ್ರಿ ಸರ್ಕಾರದಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿತ್ತಲ್ಲದೇ, ಈ ಫಲಿತಾಂಶ ಆಡಳಿತಾರೂಢ ಮೈತ್ರಿಕೂಟದ ವಿರುದ್ಧದ ಜನಾದೇಶ ಎಂದೇ ಪರಿಗಣಿಸಲಾಗಿತ್ತು.

‘ನನ್ನನ್ನು ಹಾಗೂ ರಕ್ಷಣಾ ಸಚಿವಾಲಯದ ಮಾಜಿ ಅಧಿಕಾರಿ ಹಾಗೂ ಮಹಿಂದ ರಾಜಪಕ್ಸೆ ಸಹೋದರ ಗೋತಾಭಯ ರಾಜಪಕ್ಸೆ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು’ ಎಂದು ಅಧ್ಯಕ್ಷ ಸಿರಿಸೇನ ಕಳೆದವಾರ ಆರೋಪಿಸಿದ್ದರು. ಅಲ್ಲದೇ, ‘ಮೈತ್ರಿಕೂಟದ ಅಂಗವಾಗಿರುವ ಯುಎನ್‌ಪಿ ಈ ಬಗ್ಗೆ ಗಂಭೀರವಾ
ಗಿರಲಿಲ್ಲ’ ಎಂದೂ ಆರೋಪಿಸಿದ್ದರು.

ಸಿರಿಸೇನ ಅವರ ಈಗಿನ ಕ್ರಮವು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ರಾಜಪಕ್ಸೆ ಮತ್ತು ಸಿರಿಸೇನ ಅವರ ಪಕ್ಷದ ಸದಸ್ಯರ ಸಂಖ್ಯೆ ಕೇವಲ 95. ಇದು ಸರಳ ಬಹುಮತಕ್ಕಿಂತ ಕಡಿಮೆ. ವಿಕ್ರಮಸಿಂಘೆ ಅವರ ಯುಎನ್‌ಪಿ 106 ಸದಸ್ಯರನ್ನು ಹೊಂದಿದ್ದು ಬಹುಮತಕ್ಕೆ ಏಳು ಸದಸ್ಯರ ಸಂಖ್ಯೆ ಮಾತ್ರ ಕಡಿಮೆ ಇದೆ.