ಶೆಲ್ಲಿ ಅರೋರಾ ಏಷ್ಯಾ ಪೆಸಿಫಿಕ್ ಚಾಂಪಿಯನ್

0
10

ಇಂಟರ್​ನ್ಯಾಷನಲ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್ (ಐಎನ್​ಬಿಎ) ಆಯೋಜಿಸಿದ್ದ ಏಷ್ಯಾ ಪೆಸಿಫಿಕ್ ಚಾಂಪಿಯನ್​ಶಿಪ್​ನ ಮಹಿಳಾ ದೇಹದಾರ್ಢ್ಯ ವಿಭಾಗದಲ್ಲಿ ದೆಹಲಿ ಮೂಲದ ಬೆಂಗಳೂರು ನಿವಾಸಿ ಶೆಲ್ಲಿ ಅರೋರಾ (40) ಪ್ರಶಸ್ತಿ ಗೆದ್ದಿದ್ದಾರೆ.

ಇಂಟರ್​ನ್ಯಾಷನಲ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್ (ಐಎನ್​ಬಿಎ) ಆಯೋಜಿಸಿದ್ದ ಏಷ್ಯಾ ಪೆಸಿಫಿಕ್ ಚಾಂಪಿಯನ್​ಶಿಪ್​ನ ಮಹಿಳಾ ದೇಹದಾರ್ಢ್ಯ ವಿಭಾಗದಲ್ಲಿ ದೆಹಲಿ ಮೂಲದ ಬೆಂಗಳೂರು ನಿವಾಸಿ ಶೆಲ್ಲಿ ಅರೋರಾ (40) ಪ್ರಶಸ್ತಿ ಗೆದ್ದಿದ್ದಾರೆ.

ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶೆಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಬಾಡಿಬಿಲ್ಡಿಂಗ್​ನಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ಪತಾಕೆ ಹಾರಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ ಶೆಲ್ಲಿ.

ಕಾಡಿತ್ತು ಖಿನ್ನತೆ: ಪುರುಷ ಪ್ರಧಾನ ಸಮಾಜದಲ್ಲಿ ಇವರು ಹಲವು ಸವಾಲುಗಳನ್ನು ಎದುರಿಸಿದ್ದಾಳೆ. 2017ರಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಗ, ಕಠಿಣ ವ್ಯಾಯಾಮ ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದರು. ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದ ಈಕೆಯ ಆತ್ಮವಿಶ್ವಾಸ ಕುಗ್ಗುತ್ತಾ ಹೋಯಿತು. ಈ ಸಂದರ್ಭದಲ್ಲಿ ಆಕೆಯ ಕುಟುಂಬ ಸದಸ್ಯರು ನಿಧಾನವಾಗಿ ವ್ಯಾಯಾಮ ಮಾಡುವಂತೆ ಪ್ರೇರೇಪಿಸಿದರು. ಐದಾರು ತಿಂಗಳು ಕಠಿಣ ವ್ಯಾಯಾಮ ಮಾಡಿರಲಿಲ್ಲ. ಬಳಿಕ ಒಂದು ವರ್ಷಗಳ ಕಾಲ ಜಿಮ್ಲ್ಲಿ ಕಠಿಣ ವ್ಯಾಯಾಮ ಮಾಡಿ ಅದ್ಭುತ ಮೈಕಟ್ಟು ಹೊಂದಿ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಠಿಣ ಶ್ರಮದಿಂದ ಒಲಿದ ಪ್ರಶಸ್ತಿ

2019ರಲ್ಲಿ ನಡೆಯುವ ಸ್ಪರ್ಧೆ ಬಗ್ಗೆ ಮಾಹಿತಿ ಪಡೆದುಕೊಂಡೆ. ಆರಂಭದಲ್ಲಿ ಬಿಕಿನಿ ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಲು ಅಂಜಿಕೆಯಾಗುತ್ತಿತ್ತು. ಈ ಸಂದರ್ಭದಲ್ಲಿ ನನ್ನ ತಾಯಿ ಎಲ್ಲ ಅಂಜಿಕೆಗಳನ್ನು ದೂರ ಮಾಡಿ ಗುರಿಯಡೆಗೆ ಮುನ್ನಗ್ಗುವಂತೆ ಪ್ರೇರಣೆ ನೀಡಿದರು. ಅಂತಿಮವಾಗಿ ಕಠಿಣ ಶ್ರಮದಿಂದ ನನಗೆ ಪ್ರಶಸ್ತಿ ಒಲಿಯಿತು. ಕಳೆದ 17 ವರ್ಷಗಳಲ್ಲಿ ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಸದ್ಯ ಟೆಲಿಕಾಂ ಸಂಸ್ಥೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಮುಖ್ಯಸ್ಥಳಾಗಿದ್ದೇನೆ. ಆರೋಗ್ಯ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂಬ ಆಶಯ ಇದೆ. ಮುಂದೆ ನಡೆಯುವ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಮತ್ತಷ್ಟು ಸಾಧನೆ ಮಾಡಲು ಗುರಿ ಇಟ್ಟುಕೊಂಡಿದ್ದೇನೆ ಎಂದು ತಮ್ಮ ಮನದಾಳದ ಮಾತನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ಗ್ಲೋಬಲ್ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅವರಿಗೆ 2019ರ ಟೈಮ್್ಸ ಪವರ್ ವಿಮೆನ್ ಪ್ರಶಸ್ತಿ ಲಭಿಸಿದೆ.