ಶುಜಾ ವಿರುದ್ಧ ಎಫ್​ಐಆರ್ ( ಭಾರತದ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹ್ಯಾಕಿಂಗ್ ಕುರಿತು ಲಂಡನ್​ನಲ್ಲಿ ಆಧಾರ ರಹಿತ ಆರೋಪ)

0
466

ವಿದ್ಯುನ್ಮಾನ ಮತಯಂತ್ರ(ಇವಿಎಂ) ಹ್ಯಾಕಿಂಗ್ ಕುರಿತು ಲಂಡನ್​ನಲ್ಲಿ ಆಧಾರ ರಹಿತ ಆರೋಪ ಮಾಡಿದ್ದ ಸೈಬರ್ ತಜ್ಞ ಸೈಯ್ಯದ್ ಶುಜಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಎಫ್​ಐಆರ್ ದಾಖಲಿಸಿದೆ.

ನವದೆಹಲಿ: ವಿದ್ಯುನ್ಮಾನ ಮತಯಂತ್ರ(ಇವಿಎಂ) ಹ್ಯಾಕಿಂಗ್ ಕುರಿತು ಲಂಡನ್​ನಲ್ಲಿ ಆಧಾರ ರಹಿತ ಆರೋಪ ಮಾಡಿದ್ದ ಸೈಬರ್ ತಜ್ಞ ಸೈಯ್ಯದ್ ಶುಜಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಎಫ್​ಐಆರ್ ದಾಖಲಿಸಿದೆ.

ಇವಿಎಂ ಹ್ಯಾಕಿಂಗ್ ಮೂಲಕ ಕಳೆದ ಲೋಕಸಭಾ ಚುನಾವಣೆ ಫಲಿತಾಂಶವನ್ನು ರಿಲಯನ್ಸ್ ಕಮ್ಯುನಿಕೇಷನ್ ನೆರವು ಪಡೆದು ಬಿಜೆಪಿ ಬದಲಿಸಿತ್ತು ಎಂದು ಶುಜಾ 2019 ಜನೇವರಿ 21 ರ ಸೋಮವಾರ ಹೇಳಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ದೆಹಲಿ ಪೊಲೀಸರಲ್ಲಿ ಎಫ್​ಐಆರ್ ದಾಖಲಿಸಿದೆ. ಆದರೆ ತನಿಖೆಯನ್ನು ಯಾವ ಸಂಸ್ಥೆ ನಡೆಸಲಿದೆ ಎಂದು ಖಾತ್ರಿಯಾಗಿಲ್ಲ. ಸಿಬಿಐಗೆ ತನಿಖೆಯ ಜವಾಬ್ದಾರಿ ವಹಿಸುವ ಸಾಧ್ಯತೆಯಿದೆ. ಅಮೆರಿಕದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಸುದ್ದಿಗೋಷ್ಠಿ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ತನಿಖೆಗೆ ಅಮೆರಿಕದ ನೆರವು ಕೋರುವ ಸಾಧ್ಯತೆಯೂ ಇದೆ.

ಕೇಂದ್ರ ಮಾಜಿ ಸಚಿವ ಗೋಪಿನಾಥ್ ಮುಂಡೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಇವಿಎಂ ಹಗರಣ ಕಾರಣ. ಬಿಜೆಪಿ ಗೆದ್ದಿರುವ ಎಲ್ಲ ರಾಜ್ಯಗಳ ಫಲಿತಾಂಶಕ್ಕೆ ಇವಿಎಂ ಹ್ಯಾಕಿಂಗ್ ಕಾರಣ ಎಂದು ಶುಜಾ ಆರೋಪಿಸಿದ್ದರು. ಆದರೆ ಸೂಕ್ತ ದಾಖಲೆ ನೀಡಿರಲಿಲ್ಲ.

ಸಂಬಂಧವಿಲ್ಲ ಎಂದ ಇಸಿಐಎಲ್: ಶುಜಾ ಎನ್ನುವ ವ್ಯಕ್ತಿ ಎಲೆಕ್ಟ್ರಾನಿಕ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ ಲಿಮಿಟೆಡ್(ಇಸಿಐಎಲ್)ನಲ್ಲಿ ಕೆಲಸ ಮಾಡಿದ ದಾಖಲೆ ಇಲ್ಲ. 2009-14ರ ಅವಧಿಯಲ್ಲಿ ಆ ಹೆಸರಿನ ಯಾವುದೇ ಸಿಬ್ಬಂದಿ ಕಾಯಂ ಅಥವಾ ತಾತ್ಕಾಲಿಕ ಸೇವೆಯಲ್ಲಿ ಇರಲಿಲ್ಲ. ಹೊರಗುತ್ತಿಗೆ ಮೇಲೆ ಪಡೆದ ತಜ್ಞರಲ್ಲಿಯೂ ಈ ಹೆಸರಿಲ್ಲ. ಶುಜಾ ಹೇಳಿಕೆ ಸುಳ್ಳು ಎಂದು ಇಸಿಐಎಲ್ ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ಶುಜಾ ಸುದ್ದಿಗೋಷ್ಠಿಗೆ ಬಳಿಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ ಫಾರಿನ್ ಪ್ರೆಸ್ ಅಸೋಸಿಯೇಷನ್ (ಯುರೋಪ್) ಯೂಟರ್ನ್ ಹೊಡೆದಿದೆ. ಶುಜಾ ಹೇಳಿಕೆಗಳಿಗೆ ನಾವು ಜವಾಬ್ದಾರರಲ್ಲ. ಗಂಭೀರ ಆರೋಪಗಳಿಗೆ ಯಾವುದೇ ದಾಖಲೆ ನೀಡದಿರುವುದು ಆಶ್ಚರ್ಯ ತರಿಸಿದೆ ಎಂದು ಟ್ವೀಟ್ ಮಾಡಿದೆ.