ಶಿವಕುಮಾರ ಶ್ರೀ 111 ಅಡಿ ಪ್ರತಿಮೆ ನಿರ್ಮಾಣಕ್ಕೆ ಚಾಲನೆ

0
17

ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವೆಂಬರ್ 8 ರ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಮಾಗಡಿ (ರಾಮನಗರ): ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ರಾಜ್ಯದಲ್ಲೇ ಅತಿ ಎತ್ತರದ ಪ್ರತಿಮೆ ಎನ್ನುವ ಕೀರ್ತಿ ಇದರದ್ದಾಗಲಿದೆ. ಶಿವಕುಮಾರ ಶ್ರೀಗಳ 111 ವರ್ಷಗಳ ಸಾರ್ಥಕ ಜೀವನದ ಸಂಕೇತವಾಗಿ ಅಷ್ಟೇ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಅಡಿಪಾಯವಾಗಿ 30 ಅಡಿ ಎತ್ತರದ ಕಟ್ಟೆ ನಿರ್ಮಾಣ ಆಗಲಿದೆ. ಎರಡನ್ನೂ ಸೇರಿಸಿದರೆ 141 ಅಡಿ ಎತ್ತರದವರೆಗೆ ಪ್ರತಿಮೆ ಇರಲಿದೆ. ಗದುಗಿನ ಭೀಷ್ಮ ಕೆರೆಯಲ್ಲಿ ನಿರ್ಮಾಣವಾಗಿರುವ ಬಸವಣ್ಣನವರ 116 ಅಡಿ ಎತ್ತರದ ಪ್ರತಿಮೆಯು ಸದ್ಯ ರಾಜ್ಯದ ದೊಡ್ಡ ಪ್ರತಿಮೆ ಎಂಬ ಹಿರಿಮೆ ಹೊಂದಿದೆ.

‘ಮುಂದಿನ ಎರಡು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಸಿದ್ಧಗಂಗೆಗೆ ಬರುವ ಎಲ್ಲ ಭಕ್ತರು ಇಲ್ಲಿಗೂ ಬರುವಂತೆ ಆಗಲಿದೆ. ಗ್ರಾಮದ ಅಭಿವೃದ್ಧಿಗಾಗಿ ಈಗಾಗಲೇ 25 ಕೋಟಿ ಅನುದಾನ ನೀಡಿದ್ದು, ಇನ್ನೂ 80 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಿ ವೀರಾಪುರವನ್ನು ಪಾರಂಪರಿಕ ತಾಣವಾಗಿಸಲಾಗುವುದು’ ಎಂದು ಯಡಿಯೂರಪ್ಪ ಹೇಳಿದರು.

ಇಲ್ಲಿ ಬೇಡ: ಪ್ರತಿಮೆ ನಿರ್ಮಾಣಕ್ಕೆ ಕಾರ್ಯಕ್ರಮದ ವೇದಿಕೆಯಲ್ಲೇ ಸಂಸದ ಡಿ.ಕೆ. ಸುರೇಶ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಸರ್ಕಾರ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲಿಯ ಬದಲಿಗೆ ಸಿದ್ಧಗಂಗಾ ಬೆಟ್ಟದಲ್ಲೇ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು. ವೀರಾಪುರದಲ್ಲಿ ಶ್ರೀಗಳ ಹೆಸರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿ, ಬಡವರಿಗೆ ಉಚಿತ ಶಿಕ್ಷಣ ನೀಡುವಂತೆ ಸಲಹೆ ನೀಡಿದರು. ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಂಸದ ಜಿ. ಬಸವರಾಜು, ಶಾಸಕ ಎ.ಮಂಜುನಾಥ್‌ ಇದ್ದರು.