ಶಿರಸಿ ಅಡಿಕೆಗೆ ‘ಭೌಗೋಳಿಕ ಸೂಚಿಕೆ’ ಮಾನ್ಯತೆ (ಒಟ್ಟು 14 ಪದಾರ್ಥಗಳಿಗೆ ಜಿ.ಐ ಟ್ಯಾಗ್‌ l ಹೆಸರುಗಳ ದುರ್ಬಳಕೆಗೆ ತಡೆ)

0
313

ಕರ್ನಾಟಕದ ಶಿರಸಿಯ ಅಡಿಕೆ ಹಾಗೂ ಕೊಡಗಿನ ‘ಕೂರ್ಗ್‌ ಅರೇಬಿಕಾ’ ಕಾಫಿಗೆ ಕೇಂದ್ರ ಸರ್ಕಾರ ಭೌಗೋಳಿಕ ಸೂಚಿಕೆ (ಜಿಯಾಗ್ರಫಿಕಲ್‌ ಇಂಡಿಕೇಶನ್ ಟ್ಯಾಗ್‌– ಜಿಐ ಟ್ಯಾಗ್‌) ಮಾನ್ಯತೆ ನೀಡಿದೆ.

ನವದೆಹಲಿ (ಪಿಟಿಐ): ಕರ್ನಾಟಕದ ಶಿರಸಿಯ ಅಡಿಕೆ ಹಾಗೂ ಕೊಡಗಿನ ‘ಕೂರ್ಗ್‌ ಅರೇಬಿಕಾ’ ಕಾಫಿಗೆ ಕೇಂದ್ರ ಸರ್ಕಾರ ಭೌಗೋಳಿಕ ಸೂಚಿಕೆ (ಜಿಯಾಗ್ರಫಿಕಲ್‌ ಇಂಡಿಕೇಶನ್ ಟ್ಯಾಗ್‌– ಜಿಐ ಟ್ಯಾಗ್‌) ಮಾನ್ಯತೆ ನೀಡಿದೆ.

ಪ್ರಸಕ್ತ ಸಾಲಿನಲ್ಲಿ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಒಟ್ಟು 14 ಪದಾರ್ಥಗಳಿಗೆ ಈ ಮಾನ್ಯತೆ ನೀಡಿದೆ.

ಛತ್ತೀಸ್‌ಗಡದ ಹಿಮಾಚಲಿ ಕಾಲಾ ಜೀರಾ, ಜೀರಾಫೂಲ್‌, ಒಡಿಶಾದ ಕಂಧಮಾಲ್‌ ಹಳದಿ, ವಯನಾಡಿನ ರೋಬಸ್ಟಾ ಕಾಫಿ, ಆಂಧ್ರಪ್ರದೇಶದ ಅರಕು ವ್ಯಾಲಿ ಅರೇಬಿಕಾ ಜಿಐ ಟ್ಯಾಗ್‌ ಪಡೆದ ಇತರಪದಾರ್ಥಗಳಾಗಿವೆ.

’ಜಿಐ ಟ್ಯಾಗ್‌ ಲಭಿಸಿರುವ ಪದಾರ್ಥಗಳನ್ನು ಉತ್ಪಾದಿಸುವ ಅಥವಾ ಬೆಳೆಯುವವರಿಗೆ ಅವುಗಳ ಮಾರಾಟ ಸಂದರ್ಭದಲ್ಲಿ ಹೆಚ್ಚು ಅನುಕೂಲವಾಗಲಿದೆ. ಇಂತಹ ಉತ್ಪನ್ನಗಳಿಗೆ ಹೆಚ್ಚು ದರ ನಿಗದಿಗೆ ಅವಕಾಶ ಇದ್ದು, ಇವುಗಳ ಹೆಸರುಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದು‘ ಎಂದು ರಾಷ್ಟ್ರೀಯ ಬೌದ್ಧಿಕ ಆಸ್ತಿ ಸಂಘಟನೆ (ಎನ್‌ಐಪಿಒ) ಅಧ್ಯಕ್ಷ ಟಿ.ಸಿ.ಜೇಮ್ಸ್‌ ಹೇಳುತ್ತಾರೆ.

‘ಒಂದು ಪದಾರ್ಥವು ನಿರ್ದಿಷ್ಟ ಊರು/ಸ್ಥಳದಲ್ಲಿಯೇ ಉತ್ಪಾದಿಸಲಾಗಿದೆ ಎಂಬುದನ್ನು ಈ ಮಾನ್ಯತೆ ಸಾರುತ್ತದೆ. ಜೊತೆಗೆ ಗುಣಮಟ್ಟ ಹಾಗೂ ವೈಶಿಷ್ಟ್ಯದ ಬಗ್ಗೆ ಖಾತರಿ ನೀಡುತ್ತದೆ‘ ಎಂದೂ ಅವರು ಹೇಳುತ್ತಾರೆ.

10 ವರ್ಷದ ನಂತರ ನವೀಕರಣ: ಭಾರತದಲ್ಲಿ ನೀಡಲಾಗುವ ಜಿಐ ಟ್ಯಾಗ್‌ಗಳ ಸಿಂಧುತ್ವ 10 ವರ್ಷ ಮಾತ್ರ. ನಂತರ ಅದನ್ನು ನವೀಕರಿಸಲು ಅವಕಾಶ ಇದೆ. 2004ರಲ್ಲಿ ಜಿಐ ಟ್ಯಾಗ್‌ ನೀಡುವ ಪ್ರಕ್ರಿಯೆ ಆರಂಭಗೊಂಡಿತಲ್ಲದೇ, ಡಾರ್ಜಿಲಿಂಗ್‌ ಚಹಾಕ್ಕೆ ಅದೇ ವರ್ಷ ಜಿಐ ಮಾನ್ಯತೆ ಲಭಿಸಿತು.