ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಜಾತಿ ಮೀಸಲು(ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ)

0
704

ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಸಂಸ್ಥೆ ಪ್ರವೇಶದಲ್ಲಿ ಶೇ 10ರಷ್ಟು ಮೀಸಲು ನೀಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು. ಇದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಹೇಳಿದೆ.

ನವದೆಹಲಿ (ಪಿಟಿಐ): ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಸಂಸ್ಥೆ ಪ್ರವೇಶದಲ್ಲಿ ಶೇ 10ರಷ್ಟು ಮೀಸಲು ನೀಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು. ಇದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಹೇಳಿದೆ.

ಸಚಿವಾಲಯ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ನ (ಎಐಸಿಟಿಇ) ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ. 

ಮೇಲ್ಜಾತಿಗಳ ಜನರಿಗೆ ಮೀಸಲಾತಿ ನೀಡುವುದರಿಂದ ಈಗಾಗಲೇ ಇರುವ ಮೀಸಲಾತಿ ಮೇಲೆ ಯಾವುದೇ ಪರಿಣಾಮ ಆಗದಂತೆ ಮಾಡುವುದಕ್ಕಾಗಿ ಸೀಟುಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ದೇಶದಲ್ಲಿ 40 ಸಾವಿರ ಕಾಲೇಜುಗಳು  ಮತ್ತು 900 ವಿಶ್ವವಿದ್ಯಾಲಯಗಳಿವೆ. ಈ ಎಲ್ಲ ಸಂಸ್ಥೆಗಳಲ್ಲಿ ಮೇಲ್ಜಾತಿ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 

‘ಸೀಟು ಏರಿಕೆಯನ್ನು ಯಾವ ರೀತಿ ಜಾರಿಗೆ ತರಬಹುದು ಎಂಬ ಬಗ್ಗೆ ಯೋಜನೆ ಸಿದ್ಧವಾಗುತ್ತಿದೆ. ಹೆಚ್ಚಳವಾಗಲಿರುವ ಸೀಟುಗಳ ಸಂಖ್ಯೆ ಎಷ್ಟು ಎಂಬುದು ಒಂದು ವಾರದೊಳಗೆ ತಿಳಿಯಲಿದೆ. ಮೀಸಲಾತಿ ಹೇಗೆ ಜಾರಿ ಮಾಡಬೇಕು ಎಂಬ ಕೈಪಿಡಿಯನ್ನೂ ಬಿಡುಗಡೆ ಮಾಡಲಾಗುವುದು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಮಾಹಿತಿ ಪತ್ರದಲ್ಲಿ ಮೀಸಲಾತಿ ಮಾಹಿತಿ ನೀಡಬೇಕು ಮತ್ತು ಮೀಸಲಾತಿ ಜಾರಿಗೆ ಬೇಕಾದ ಮೂಲಸೌಕರ್ಯ ಹೊಂದಿಸಿಕೊಳ್ಳಬೇಕು’ ಎಂದು ಜಾವಡೇಕರ್‌ ಹೇಳಿದ್ದಾರೆ.  ಖಾಸಗಿ ವಿಶ್ವವಿದ್ಯಾಲಯಗಳೂ ಮೇಲ್ಜಾತಿ ಮೀಸಲು ಜಾರಿಗೆ ಸಮ್ಮತಿಸಿವೆ ಎಂದು ತಿಳಿಸಿದರು. ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತು ಈಚೆಗೆ ಅನುಮೋದಿಸಿತ್ತು.