ಶಿಕ್ಷಕ ತರಬೇತುದಾರರಿಗೂ ರಾಷ್ಟ್ರೀಯ ಪ್ರಶಸ್ತಿ : ಕೇಂದ್ರ ಸರ್ಕಾರ

0
49

ಉತ್ತಮ ಶಿಕ್ಷಕರಿಗೆ ರಾಷ್ಟ್ರಮಟ್ಟದ ‘ಶ್ರೇಷ್ಠ ಶಿಕ್ಷಕ’ ಪ್ರಶಸ್ತಿ ನೀಡುತ್ತಿದ್ದ ಕೇಂದ್ರ ಸರ್ಕಾರವು ಇನ್ನು ಮುಂದೆ ಇಂಥ ಶಿಕ್ಷಕರಿಗೆ ತರಬೇತಿ ನೀಡುವವರನ್ನು ಗುರುತಿಸಿ ಗೌರವಿಸಲು ಮುಂದಾಗಿದೆ.

ನವದೆಹಲಿ: ಉತ್ತಮ ಶಿಕ್ಷಕರಿಗೆ ರಾಷ್ಟ್ರಮಟ್ಟದ ‘ಶ್ರೇಷ್ಠ ಶಿಕ್ಷಕ’ ಪ್ರಶಸ್ತಿ ನೀಡುತ್ತಿದ್ದ ಕೇಂದ್ರ ಸರ್ಕಾರವು ಇನ್ನು ಮುಂದೆ ಇಂಥ ಶಿಕ್ಷಕರಿಗೆ ತರಬೇತಿ ನೀಡುವವರನ್ನು ಗುರುತಿಸಿ ಗೌರವಿಸಲು ಮುಂದಾಗಿದೆ.

ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ‘ಅತ್ಯುತ್ತಮ ಸಾಧನೆ’ ಮಾಡಿರುವವರಿಗೆ ಪ್ರಸಕ್ತ ಸಾಲಿನಿಂದಲೇ ‘ಅತ್ಯುತ್ತಮ ಶಿಕ್ಷಕ ತರಬೇತುದಾರ’ ಪ್ರಶಸ್ತಿ ನೀಡಲಿದೆ. ಈ ವರ್ಷ 20 ಮಂದಿಯನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು. ಪ್ರಶಸ್ತಿಯು 25,000 ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.

ಶಿಕ್ಷಕರಿಗೆ ತರಬೇತಿ ನೀಡುವ ಅಂಗೀಕೃತ ಸಂಸ್ಥೆಯಲ್ಲಿ ಕನಿಷ್ಠ 10 ವರ್ಷ ಕೆಲಸ ಮಾಡಿರುವ, 55 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಸೆಪ್ಟೆಂಬರ್‌ 5ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆದನ್ನು ಸಂಸ್ಥೆಯ ಪ್ರಾಂಶುಪಾಲರು, ಡೀನ್‌ ಅಥವಾ ರಿಜಿಸ್ಟ್ರಾರ್‌ ದೃಢೀಕರಿಸಬೇಕಾಗುತ್ತದೆ.
 
ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ತಾವು ಅನುಸರಿಸಿದ ಮತ್ತು ಪರಿಣಾಮಕಾರಿಯಾದ ಎರಡು ನವೀನ ಮಾದರಿಗಳ ವಿವರವನ್ನು ಅರ್ಜಿದಾರರು ನೀಡಿರಬೇಕು. ಅರ್ಜಿಯ ಜೊತೆಗೆ ಇಬ್ಬರು ಶಿಕ್ಷಣ ತಜ್ಞರ ಶಿಫಾರಸು ಇರಬೇಕಾದದ್ದು ಕಡ್ಡಾಯ. ಆಯ್ಕೆಯ ಸಂದರ್ಭದಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಇತರ ಹಿಂದುಳಿದ ವರ್ಗದವರು ಮತ್ತು ಅಂಗವಿಕಲರನ್ನೂ ಪರಿಗಣಿಸಲಾಗುವುದು. ಪ್ರಶಸ್ತಿ ಪ್ರದಾನ ದಿನವನ್ನು ಶೀಘ್ರ ಘೋಷಿಸಲಾಗುವುದು ಎಂದು ಪರಿಷತ್ತು ತಿಳಿಸಿದೆ.
 
ಶಿಕ್ಷಕರ ಶಿಕ್ಷಣ ರಾಷ್ಟ್ರೀಯ ಪರಿಷತ್ತು (ಎನ್‌ಸಿಟಿಇ) 2019ನೇ ಸಾಲಿನ ಈ ಪ್ರಶಸ್ತಿಗಳಿಗಾಗಿ ಆನ್‌ಲೈನ್‌ ಮೂಲಕ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.