ಶಿಕ್ಷಕರ ಮೀಸಲು: ವಿ.ವಿಯೇ ಘಟಕ (ವಿಭಾಗವಾರು ಮೀಸಲಾತಿ ಇಲ್ಲ: ಮಸೂದೆಗೆ ಲೋಕಸಭೆ ಒಪ್ಪಿಗೆ)

0
13

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಲೆಕ್ಕ ಹಾಕಲು ವಿಭಾಗದ ಬದಲಿಗೆ ಇಡೀ ವಿಶ್ವವಿದ್ಯಾಲಯವನ್ನು ಒಂದು ಘಟಕವಾಗಿ ಪರಿಗಣಿಸುವ ಮಸೂದೆಗೆ ಲೋಕಸಭೆ ಸೋಮವಾರ ಒಪ್ಪಿಗೆ ಕೊಟ್ಟಿದೆ.

ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಲೆಕ್ಕ ಹಾಕಲು ವಿಭಾಗದ ಬದಲಿಗೆ ಇಡೀ ವಿಶ್ವವಿದ್ಯಾಲಯವನ್ನು ಒಂದು ಘಟಕವಾಗಿ ಪರಿಗಣಿಸುವ ಮಸೂದೆಗೆ ಲೋಕಸಭೆ ಸೋಮವಾರ ಒಪ್ಪಿಗೆ ಕೊಟ್ಟಿದೆ. ಮೀಸಲು ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯುವುದನ್ನು ಖಾತರಿಪಡಿಸುವ ಅಂಶವೂ ಈ ಮಸೂದೆಯಲ್ಲಿ ಇದೆ. 

ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕರಿಗೆ ಮೀಸಲಾತಿ) ಮಸೂದೆ 2019 ಅನ್ನು ಲೋಕಸಭೆಯು ಧ್ವನಿಮತದಿಂದ ಅಂಗೀಕರಿಸಿತು. ಮಸೂದೆಯನ್ನು ಪ‍ರಿಶೀಲನೆಗಾಗಿ ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದವು. ಆದರೆ, ಎನ್‌ಡಿಎಗೆ ಬಹುಮತ ಇರುವ ಕಾರಣ ವಿರೋಧ ಪಕ್ಷಗಳ ಒತ್ತಾಯಕ್ಕೆ ಮನ್ನಣೆ ದೊರೆಯಲಿಲ್ಲ. 

ಶಿಕ್ಷಕರ ನೇಮಕಾತಿಯಲ್ಲಿ ವಿಭಾಗವಾರು ಅಥವಾ ವಿಷಯವಾರು ಮೀಸಲಾತಿ ನೀಡಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಹಾಗಾಗಿ, ಇಡೀ ಸಂಸ್ಥೆಯನ್ನು ಒಂದು ಘಟಕವಾಗಿ ಪರಿಗಣಿಸುವ ಸುಗ್ರೀವಾಜ್ಞೆಯನ್ನು ಮಾರ್ಚ್‌ನಲ್ಲಿ ಹೊರಡಿಸಲಾಗಿತ್ತು. ಈಗ ಅದರ ಬದಲಿಗೆ ಮಸೂದೆ ತರಲಾಗಿದೆ. ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಬೇಕಾಗಿದೆ.  ಕೋರ್ಟ್‌ ತೀರ್ಪನ್ನು ಅನುಸರಿಸಿದರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ದೊರೆಯುವ ಹುದ್ದೆಗಳ ಪ್ರಮಾಣದಲ್ಲಿ ಗಣನೀಯ ಕಡಿತವಾಗುತ್ತದೆ ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳು ಮತ್ತು ದಲಿತ ಸಂಘಟನೆಗಳು ತೀರ್ಪನ್ನು ವಿರೋಧಿಸಿದ್ದವು. 

ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವುದಕ್ಕೂ ಈ ಮಸೂದೆಯಲ್ಲಿ ಅವಕಾಶ ಇದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಹೇಳಿದ್ದಾರೆ. 

ಮಸೂದೆಯಲ್ಲಿ ಇರುವ ಅಂಶಗಳ ಬಗ್ಗೆ ತಕರಾರು ಇಲ್ಲ, ಆದರೆ, ಲೋಕಸಭೆ ಚುನಾವಣೆಗೆ ಮೊದಲು ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯ ಏನಿತ್ತು ಎಂಬುದೇ ತಮ್ಮ ಪ್ರಶ್ನೆ ಎಂದು ಲೋಕಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದರು. ಮಸೂದೆಯನ್ನು ‍ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.