ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸಿದ ಕೇಂದ್ರ ಸರಕಾರ; 1-2ನೇ ತರಗತಿ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ

0
384

ಕೇಂದ್ರ ಸರಕಾರ ಹಲವು ವರ್ಷಗಳ ಬೇಡಿಕೆಯಾದ ಶಾಲಾ ಮಕ್ಕಳ ಪುಸ್ತಕದ ಭಾರವನ್ನು ಇಳಿಸಿದೆ. ಜತೆಗೆ, ಗಣಿತ ಹಾಗೂ ಭಾಷೆಗಳನ್ನು ಹೊರತುಪಡಿಸಿ ಎರಡನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂದೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.

ಹೊಸದಿಲ್ಲಿ: ಶಾಲಾ ಮಕ್ಕಳ ಬ್ಯಾಗಿನ ಹೊರೆ ಇಳಿಸುವ ವಿಚಾರದಲ್ಲಿ ಹಾಗೂ ಮಕ್ಕಳಿಗೆ ಹೋಂವರ್ಕ್ ಕೊಡುವ ವಿಚಾರದಲ್ಲಿ ಕೇಂದ್ರ ಸರಕಾರ  ಹಲವು ಕ್ರಮಗಳನ್ನು ಕೈಗೊಂಡಿದೆ.ಇದಕ್ಕೆ ಸಂಬಂಧಪಟ್ಟಂತೆಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಮಾರ್ಗದರ್ಶಿ ಸೂತ್ರ ಪಾಲಿಸುವಂತೆ ನಿರ್ದೇಶನ ನೀಡಿದೆ. 

1 ಮತ್ತು 2 ನೇ ತರಗತಿಯ ಮಕ್ಕಳಿಗೆ ಒಂದೂವರೆ ಕೆಜಿಯಷ್ಟು ಮಾತ್ರ ಬ್ಯಾಗಿನ ತೂಕವಿರಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ದೇಶಿಸಿದೆ. ಇದೇ ರೀತಿ, 3 ಮತ್ತು 5 ನೇ ತರಗತಿಯ ಮಕ್ಕಳಿಗೆ 2 – 3 ಕೆ.ಜಿ, 6 ರಿಂದ 7 ನೇ ತರಗತಿಯ ಮಕ್ಕಳಿಗೆ 4 ಕೆಜಿ, 8 ಮತ್ತು 9 ನೇ ತರಗತಿಯ ಮಕ್ಕಳಿಗೆ ನಾಲ್ಕೂವರೆ ಕೆಜಿ ಹಾಗೂ 10 ನೇ ತರಗತಿಯ ಮಕ್ಕಳಿಗೆ ಐದು ಕೆಜಿ ಬ್ಯಾಗ್ ತೂಕ ಮೀರುವಂತಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಿದೆ. 

ಅಲ್ಲದೆ, ಇನ್ಮುಂದೆ ಶಿಕ್ಷಕರು 1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂದೂ ಸೂಚನೆ ನೀಡಿದೆ. ಇನ್ನು, 1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಗಣಿತ ಹಾಗೂ ಭಾಷಾ ವಿಷಯಗಳನ್ನು ಮಾತ್ರ ನಿಗದಿ ಮಾಡಬೇಕು. ಹಾಗೂ, 3 ಮತ್ತು 4 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಗಣಿತ, ಭಾಷೆ ಹಾಗೂ ಇವಿಎಸ್‌ ಭಾಷೆಗಳನ್ನು ಮಾತ್ರ ನಿಗದಿ ಮಾಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ. 

ಕೇಂದ್ರ ಸರಕಾರದ ಈ ಸೂಚನೆಗಳನ್ನು ಹೊರತುಪಡಿಸಿ ಶಾಲೆಗಳು ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಪುಸ್ತಕಗಳನ್ನು ತರಲು ಹೇಳಬಾರದು. ಹಾಗೂ ಬ್ಯಾಗಿನ ತೂಕ ಹೆಚ್ಚದಂತೆ ನೋಡಿಕೊಳ್ಳಬೇಕು ಎಂದೂ ಸೂಚಿಸಿದೆ