ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆ ಇನ್ನು ಜೇನುತುಪ್ಪ ನೀಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚನೆ

0
772

ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಜೇನು ತುಪ್ಪವನ್ನೂ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಕೋರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಬೆಂಗಳೂರು: ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಜೇನು ತುಪ್ಪವನ್ನೂ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಕೋರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. 

ದೇಶದ ಗ್ರಾಮೀಣ ಪ್ರದೇಶದಲ್ಲಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೃಷಿಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮೂಲಕ ವರಮಾನ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಜೇನು ಮಂಡಳಿಯ ಕೋರಿಕೆ ಮೇರೆಗೆ ಕೇಂದ್ರ ಕೃಷಿ ಸಚಿವಾಲಯ ಇಂಥದೊಂದು ಪ್ರಸ್ತಾವನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮುಂದಿಟ್ಟಿತ್ತು. ಕೃಷಿ ಸಚಿವಾಲಯದ ಮನವಿ ಮೇರೆಗೆ ಬಿಸಿಯೂಟ ಯೋಜನೆಯಡಿ ಜೇನು ತುಪ್ಪ ಸೇರಿಸಲು ಸಚಿವಾಲಯ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ. 

”ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಜೇನು ತುಪ್ಪವನ್ನು ಪೂರೈಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ನಮಗೆ ಮಾಹಿತಿ ಬಂದಿದೆ. ಆದರೆ, ಯಾವ ವಯಸ್ಸಿನ ಮಕ್ಕಳಿಗೆ, ಎಷ್ಟು ಪ್ರಮಾಣದಲ್ಲಿ ಜೇನು ತುಪ್ಪವನ್ನು ಹೇಗೆ ಪೂರೈಸಬೇಕೆಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ, ನಾವು ಆರೋಗ್ಯ ಇಲಾಖೆಗೆ ಪತ್ರ ಬರೆದು ಸಲಹೆ ಕೇಳುತ್ತೇವೆ. ಅಲ್ಲದೆ, ಯಾವ ಗುಣಮಟ್ಟ ಹಾಗೂ ಪ್ರಮಾಣದ ಜೇನು ತುಪ್ಪ ನೀಡಬೇಕೆಂಬುದರ ಬಗ್ಗೆ ತಜ್ಞರಿಂದಲೂ ಸಲಹೆ ಪಡೆಯುತ್ತೇವೆ. ಆನಂತರ ನಾವು ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುತ್ತೇವೆ,” ಎಂದು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಧಿಕಾರಿ ಮಾರುತಿ ಪ್ರತಿಕ್ರಿಯಿಸಿದ್ದಾರೆ. 

”ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸರಕಾರದ ನಾನಾ ಇಲಾಖೆಗಳ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ಜೇನು ತುಪ್ಪದಲ್ಲಿ ಪೌಷ್ಟಿಕಾಂಶಗಳಿರುವ ಬಗ್ಗೆ ವಿಸ್ತೃತ ಚರ್ಚಿಸಲಾಯಿತು. ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಎಲ್ಲ ರಾಜ್ಯ ಸರಕಾರಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ತುಪ್ಪವನ್ನು ಮಕ್ಕಳಿಗೆ ನೀಡುವುದಕ್ಕೆ ಸೂಚನೆ ನೀಡಲು ನಿರ್ಧರಿಸಲಾಯಿತು,” ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ. 
– ಜೇನುತುಪ್ಪದಲ್ಲಿ ಏನೇನು ಇರುತ್ತದೆ? 
ಜೇನು ತುಪ್ಪದಲ್ಲಿ ಕಾರ್ಬೋಹೈಡ್ರೇಟ್ಸ್‌, ಅಮಿನೋ ಆಮ್ಲದ ಜತೆಗೆ ಎ, ಇ, ಡಿ, ಬಿ-1, ಬಿ-2, ಬಿ-3 ನಿಯಾಸಿನ್‌ನಂಥ ಪ್ರೊಟೀನ್‌ ಅಂಶಗಳ ಜತೆಗೆ, ಸೋಡಿಯಂ, ಪೊಟ್ಯಾಷಿಯಂ, ಸತು ಸೇರಿದಂತೆ ಇತರೆ ಖನಿಜಾಂಶಗಳು ಹೇರಳವಾಗಿವೆ. ಇದು ಮಕ್ಕಳ ಆರೋಗ್ಯಕ್ಕೆ ಉತ್ತಮವ ಎಂದು ಕೇಂದ್ರ ಕೃಷಿ ಸಚಿವಾಲಯವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿರುವ ಪತ್ರದಲ್ಲಿ ವಿವರಿಸಿದೆ.