ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಹೋರಾಡಿದ್ದ ಜಮ್ಮು ಕಾಶ್ಮೀರದ ಬಾಲಕನಿಗೆ ಶೌರ್ಯ ಚಕ್ರ

0
683

ತಮ್ಮ ಕುಟುಂಬಸ್ಥರನ್ನು ರಕ್ಷಿಸಲು ಮೂವರು ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡಿದ ಜಮ್ಮು ಮತ್ತು ಕಾಶ್ಮೀರದ ಬಾಲಕನಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ನವದೆಹಲಿ: ತಮ್ಮ ಕುಟುಂಬಸ್ಥರನ್ನು ರಕ್ಷಿಸಲು ಮೂವರು ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡಿದ ಜಮ್ಮು ಮತ್ತು ಕಾಶ್ಮೀರದ ಬಾಲಕನಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಭಾರತೀಯ ಸೇನಾಪಡೆ ಹಾಗೂ ಅರೆಸೇನಾಪಡೆಗಳಲ್ಲಿ ಅಭೂತಪೂರ್ವ ಶೌರ್ಯ ತೋರಿದ ಯೋಧರಿಗೆ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ 16 ವರ್ಷದ “ಇರ್ಫಾನ್​ ರಂಜಾನ್​ ಶೇಖ್”​ ಎಂಬ ಬಾಲಕನಿಗೆ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

2017ರ ಅಕ್ಟೋಬರ್​ 16ರ ಮಧ್ಯರಾತ್ರಿ ಕಾಶ್ಮೀರದ ಶೋಪಿಯಾನ್​ ಜಿಲ್ಲೆಯ ನಿವಾಸಿ ಪಿಡಿಪಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ಸರ್​ಪಂಚ್​ ಮೊಹಮ್ಮದ್​ ರಂಜಾನ್​ ಎಂಬುವವರ ಮನೆಗೆ ಮೂವರು ಶಸ್ತ್ರಸಜ್ಜಿತ ಉಗ್ರರು ಬಂದಿದ್ದರು. ಘಟನೆ ನಡೆದ ಸಂದರ್ಭದಲ್ಲಿ 14 ವರ್ಷದವನಾಗಿದ್ದ ಇರ್ಫಾನ್​ ರಂಜಾನ್​ ಶೇಖ್​ ವರಾಂಡಾದಲ್ಲಿ ಮೂವರು ಶಸ್ತ್ರಸಜ್ಜಿತ ಉಗ್ರರು ನಿಂತಿರುವುದನ್ನು ನೋಡಿದ್ದಾನೆ. ತಕ್ಷಣ ಉಗ್ರರು ಮನೆಯೊಳಗೆ ಬರದಂತೆ ತಡೆಯಲು ಪ್ರಯತ್ನಿಸಿದ್ದ. ಈ ವೇಳೆ ಹೊರಗೆ ಬಂದ ಮೊಹಮ್ಮದ್​ ರಂಜಾನ್​ ಮೇಲೆ ಉಗ್ರರು ದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೊಹಮ್ಮದ್​ ರಂಜಾನ್​ ತೀವ್ರವಾಗಿ ಗಾಯಗೊಂಡು ನಂತರ ನಿಧನ ಹೊಂದಿದ್ದರು.

ತಂದೆಗೆ ಗುಂಡೇಟು ತಗುಲಿದರೂ ಧೃತಿಗೆಡದ ಶೇಖ್​ ಉಗ್ರರ ವಿರುದ್ಧ ಹೋರಾಟ ಮುಂದುವರಿಸಿದ್ದ. ಈ ವೇಳೆ ಉಗ್ರನೊಬ್ಬ ಮನಸೋಇಚ್ಛೆ ಗುಂಡು ಹಾರಿಸಿದ್ದ. ಆದರೆ, ಉಗ್ರ ಹಾರಿಸಿದ ಗುಂಡು ಮತ್ತೊಬ್ಬ ಉಗ್ರನಿಗೆ ತಗುಲಿ ಆತ ಗಂಭೀರವಾಗಿ ಗಾಯಗೊಂಡಿದ್ದ. ತಮ್ಮ ಸಹಚರನಿಗೆ ಗುಂಡು ತಗುಲಿದ್ದನ್ನು ಗಮನಿಸಿದ ಉಗ್ರರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಉಗ್ರರನ್ನು ಅಟ್ಟಿಸಿಕೊಂಡು ಹೋದ ಶೇಖ್​ ಅವರು ತಮ್ಮ ಸಹಚರನ ಮೃತದೇಹವನ್ನು ಕೊಂಡೊಯ್ಯದಂತೆ ತಡೆದಿದ್ದ.

ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ಶೇಖ್​ ಭವಿಷ್ಯದಲ್ಲಿ ಐಪಿಎಸ್​ ಆಫೀಸರ್​ ಆಗಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಾನೆ. (ಏಜೆನ್ಸೀಸ್​)