ಶನಿ ಸುತ್ತ 20 ಹೊಸ ಉಪಗ್ರಹಗಳು ಪತ್ತೆ

0
23

ಶನಿ ಗ್ರಹದ ಸುತ್ತಲೂ 20 ನೂತನ ಉಪಗ್ರಹಗಳು ಪರಿಭ್ರಮಿಸುತ್ತಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ವಾಷಿಂಗ್ಟನ್‌ (ಪಿಟಿಐ): ಶನಿ ಗ್ರಹದ ಸುತ್ತಲೂ 20 ನೂತನ ಉಪಗ್ರಹಗಳು ಪರಿಭ್ರಮಿಸುತ್ತಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಇದರೊಂದಿಗೆ ಶನಿಯ ಉಪಗ್ರಹಗಳ ಸಂಖ್ಯೆ 82ಕ್ಕೆ ಏರಿದೆ. ಇದುವರೆಗೂ 79 ಉಪಗ್ರಹ ಹೊಂದಿದ್ದ ಗುರು ಅತಿ ಹೆಚ್ಚು ಉಪಗ್ರಹ ಹೊಂದಿದ ಗ್ರಹವಾಗಿತ್ತು. ಶನಿ ಈ ನಿಟ್ಟಿನಲ್ಲಿ ಗುರುವನ್ನು ಹಿಂದಿಕ್ಕಿದೆ.

ಅಮೆರಿಕದ ಕಾರ್ನೇಜ್‌ ವಿಜ್ಞಾನ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ ಸಂಶೋಧಕರ ಪ್ರಕಾರ, ಹೊಸದಾಗಿ ಅನ್ವೇಷಿಸಲಾದ ಉಪ ಗ್ರಹಗಳು ಐದು ಕಿ.ಮೀಟರ್‌ನಷ್ಟು ಅಗಲವಾಗಿವೆ ಅಥವಾ ವ್ಯಾಸ ಹೊಂದಿವೆ. ಇವುಗಳ ಪೈಕಿ 17 ಉಪಗ್ರಹಗಳು ಶನಿಗೆ ವಿರುದ್ಧವಾಗಿ ಪರಿಭ್ರಮಿಸುತ್ತಿವೆ.

ಅನ್ವೇಷಣೆಯ ಮಾಹಿತಿಗಳನ್ನು ಇಲ್ಲಿನ ಮೈನರ್ ಪ್ಲಾನೆಟ್‌ ಸೆಂಟರ್‌ನಲ್ಲಿ ಬಹಿರಂಗಪಡಿಸಲಾಯಿತು. ಹೊಸದಾಗಿ ಗುರುತಿಸಲಾದ 20 ಉಪಗ್ರಹಗಳ ಪೈಕಿ ಉಳಿದ ಮೂರು ಶನಿ ಗ್ರಹದ ಚಲನೆಯ ದಿಕ್ಕಿನಲ್ಲಿಯೇ ಪರಿಭ್ರಮಿಸುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆ ಪೈಕಿ ಎರಡು ಉಪಗ್ರಹಗಳು ಶನಿಗೆ ಸಮೀಪದಲ್ಲಿವೆ. ಇವು ಶನಿಯ ಸುತ್ತ ಒಂದು ಸುತ್ತು ಸುತ್ತಲು ಎರಡು ವರ್ಷ ತೆಗೆದುಕೊಳ್ಳಲಿವೆ. ಮತ್ತೊಂದು ಉಪಗ್ರಹ ಮೂರು ವರ್ಷ ತೆಗೆದುಕೊಳ್ಳುತ್ತದೆ ಎಂಬ ಅಂಶ ಉಲ್ಲೇಖಿಸಿದ್ದಾರೆ.

‘ಹೊಸದಾಗಿ ಗುರುತಿಸಲಾದ ಶನಿಯ ಈ ಉಪಗ್ರಹಗಳ ಕಕ್ಷೆಯನ್ನು ಕುರಿತು ಹೆಚ್ಚಿನ ಸಂಶೋಧನೆ ನಡೆದರೆ ಈ ಗ್ರಹಗಳ ಮೂಲ ಹಾಗೂ ಈ ಗ್ರಹಗಳು ಉಗಮಿಸಿದಾಗ ಶನಿ ಗ್ರಹದ ಸುತ್ತಲೂ ಇದ್ದ ಸ್ಥಿತಿಗತಿಯ ಮಾಹಿತಿಗಳು ಬೆಳಕಿಗೆ ಬರಬಹುದು’ ಎಂದು ಅನ್ವೇ
ಷಣಾ ತಂಡದ ನೇತೃತ್ವವನ್ನು ವಹಿಸಿರುವ ಕಾರ್ನೇಜ್‌ ಇನ್‌ಸ್ಟಿಟ್ಯೂಷನ್ ಫಾರ್‌ ಸೈನ್ಸ್‌ ಸಂಸ್ಥೆಯ ಸ್ಕಾಟ್‌ ಎಸ್‌. ಶೆಫರ್ಡ್‌ ಅವರು ಅಭಿಪ್ರಾಯಪಟ್ಟಿದ್ದಾರೆ.