ಶಂಕರ್, ನಾಗೇಶ್‌ಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ

0
16

ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ಹೆಣೆದಿರುವ ಮೈತ್ರಿಕೂಟದ ನಾಯಕರು, ಬಿಜೆಪಿ ಕಡೆಗೆ ವಾಲಬಹುದಾಗಿದ್ದ ಇಬ್ಬರು ಪಕ್ಷೇತರರಿಗೆ ಮಾತ್ರ ಸಚಿವ ಸ್ಥಾನ ಕೊಟ್ಟಿದ್ದು, ಜೆಡಿಎಸ್‌ ಪಾಲಿನ ಒಂದು ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ಹೆಣೆದಿರುವ ಮೈತ್ರಿಕೂಟದ ನಾಯಕರು, ಬಿಜೆಪಿ ಕಡೆಗೆ ವಾಲಬಹುದಾಗಿದ್ದ ಇಬ್ಬರು ಪಕ್ಷೇತರರಿಗೆ ಮಾತ್ರ ಸಚಿವ ಸ್ಥಾನ ಕೊಟ್ಟಿದ್ದು, ಜೆಡಿಎಸ್‌ ಪಾಲಿನ ಒಂದು ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ರಾಣೆಬೆನ್ನೂರು ಶಾಸಕ ಆರ್.ಶಂಕರ್, ಮುಳಬಾಗಿಲು ಶಾಸಕ ಎಚ್.ನಾಗೇಶ್ ಸಂಪುಟ ದರ್ಜೆ ಸಚಿವರಾಗಿ ರಾಜಭವನದಲ್ಲಿ ಜೂನ್ 14 ರ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಈ ಸಮಾರಂಭಕ್ಕೆ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಆರ್. ಶಂಕರ್, ತಾವು ಪ್ರತಿನಿಧಿಸುವ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಪತ್ರ ನೀಡಿದರು. ಪಕ್ಷ ವಿಲೀನಗೊಳಿಸಿದರೆ ಮಾತ್ರ ಸಚಿವ ಸ್ಥಾನ ನೀಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಇದರಿಂದಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 80ಕ್ಕೆ ಏರಿದಂತಾಗಿದೆ.

ಫಾರೂಕ್‌ಗೆ ಸಿಗದ ಸ್ಥಾನ: ಜೆಡಿಎಸ್‌ನ ಪಾಲಿನ ಒಂದು ಸ್ಥಾನವನ್ನು ಎಚ್. ನಾಗೇಶ್‌ಗೆ ಬಿಟ್ಟುಕೊಟ್ಟಿದ್ದು, ಮತ್ತೊಂದು ಸ್ಥಾನವನ್ನು ವಿಧಾನ ಪರಿಷತ್ತಿನ ಸದಸ್ಯ ಬಿ.ಎಂ. ಫಾರೂಕ್ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿತ್ತು. ಎಚ್.ಡಿ. ದೇವೇಗೌಡ ಅವರು ಫಾರೂಕ್ ಪರ ಒಲವು ಹೊಂದಿದ್ದರು. ದಕ್ಷಿಣ ಕನ್ನಡ ಪ್ರತಿನಿಧಿಸುವ ಯು.ಟಿ. ಖಾದರ್ ಕಾಂಗ್ರೆಸ್‌ನಿಂದ ಸಚಿವರಾಗಿದ್ದಾರೆ. ಅದೇ ಜಿಲ್ಲೆ ಹಾಗೂ ಅದೇ ಸಮುದಾಯಕ್ಕೆ ಸೇರಿದವರಿಗೆ ಮತ್ತೊಂದು ಸಚಿವ ಸ್ಥಾನ ನೀಡುವುದು ಬೇಡ. ಅವರ ಬದಲು ಬಸವರಾಜ ಹೊರಟ್ಟಿ ಅಥವಾ ಎಚ್. ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಕುಮಾರಸ್ವಾಮಿ ಅಪೇಕ್ಷೆಯಾಗಿತ್ತು. ಇಬ್ಬರ ಮಧ್ಯೆ ಸಹಮತ ಬರದೇ ಇರುವುದು ಹಾಗೂ ಒಂದು ವೇಳೆ ಮೈತ್ರಿಕೂಟದ ಶಾಸಕರು ಬಂಡಾಯವೆದ್ದರೆ ತೃಪ್ತಿ ಪಡಿಸಲು ಒಂದು ಸ್ಥಾನ ಇರಲಿ ಎಂಬ ಕಾರಣಕ್ಕೆ ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.