ವ್ಯೋಮದಲ್ಲಿ ಸಿಮೆಂಟ್‌ ಮಿಶ್ರಣ: ಐಎಸ್‌ಎಸ್‌ನಲ್ಲಿ ಮೊದಲ ಬಾರಿ ಪ್ರಯೋಗ

0
8

ಅಂತರ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಳಗಿನ(ಐಎಸ್‌ಎಸ್‌) ಗಗನಯಾತ್ರಿಗಳು, ಇದೇ ಮೊದಲ ಬಾರಿಗೆ ಗುರುತ್ವಾಕರ್ಷಣೆ ಕಡಿಮೆ ಇರುವಂಥ ವಾತಾವರಣದಲ್ಲಿ ಸಿಮೆಂಟ್‌ ಮಿಶ್ರಣ ಮಾಡಿ ಪರೀಕ್ಷಿಸಿದ್ದಾರೆ.

ವಾಷಿಂಗ್ಟನ್‌(ಪಿಟಿಐ): ಅಂತರ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಳಗಿನ(ಐಎಸ್‌ಎಸ್‌) ಗಗನಯಾತ್ರಿಗಳು, ಇದೇ ಮೊದಲ ಬಾರಿಗೆ ಗುರುತ್ವಾಕರ್ಷಣೆ ಕಡಿಮೆ ಇರುವಂಥ ವಾತಾವರಣದಲ್ಲಿ ಸಿಮೆಂಟ್‌ ಮಿಶ್ರಣ ಮಾಡಿ ಪರೀಕ್ಷಿಸಿದ್ದಾರೆ. 

‘ಈ ಪರೀಕ್ಷೆಯಿಂದ ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿನ ತೀವ್ರವಾದ ತಾಪಮಾನ ಮತ್ತು ವಿಕಿರಣಗಳಿಂದ ಗಗನಯಾತ್ರಿಗಳನ್ನು ರಕ್ಷಿಸಲು ಸಾಧ್ಯವಾಗಲಿದೆ’ ಎಂದು ನಾಸಾ ತಿಳಿಸಿದೆ.

ಗುರುತ್ವಾಕರ್ಷಣೆ ಇಲ್ಲದ ವಾತಾವರಣದಲ್ಲಿ ಸಿಮೆಂಟ್‌ ಹೇಗೆ ಘನ ರೂಪಕ್ಕೆ ತಿರುಗುತ್ತದೆ(ಮಿಕ್ಸ್‌) ಎನ್ನುವುದನ್ನು ಈ ಮೂಲಕ ಅಧ್ಯಯನ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ ಸಿಮೆಂಟ್‌ನ ಮೂಲ ಉತ್ಪನ್ನದಲ್ಲಿ ಒಂದಾದ ಟ್ರೈಕ್ಯಾಲ್ಸಿಯಂ ಸಿಲಿಕೇಟ್‌ (ಸಿ3ಎಸ್‌)ಅನ್ನು ನೀರಿನ ಜತೆ ಮಿಶ್ರಣ ಮಾಡಲಾಯಿತು. 

ಮಿಕ್ಸ್‌ ಯೋಜನೆಯಡಿ ಇದೇ ಮೊದಲ ಬಾರಿಗೆ ಭೂಮಿಯಲ್ಲಿ ತಯಾರಿಸಲ್ಪಟ್ಟ ಸಿಮೆಂಟ್‌ ಮಿಶ್ರಣ ಹಾಗೂ ಬಾಹ್ಯಾಕಾಶದಲ್ಲಿ ತಯಾರಿಸಲ್ಪಟ್ಟ ಸಿಮೆಂಟ್‌ ಮಿಶ್ರಣದ ವ್ಯತ್ಯಾಸವನ್ನು ಅಧ್ಯಯನ ಮಾಡಲಾಗಿದೆ. ಮಿಶ್ರಣದಿಂದ ತಯಾರಾದ ಉತ್ಪನ್ನದ ಸೂಕ್ಷ್ಮ ರಚನೆಯಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ಇದರ ಸಾಮರ್ಥ್ಯವನ್ನು ಪರೀಕ್ಷಿಸಬೇಕಾಗಿದೆ ಎಂದು ತಿಳಿಸಲಾಗಿದೆ.  
 
‘ಗಗನಯಾತ್ರಿಗಳು ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳ ಗ್ರಹಕ್ಕೆ ತೆರಳುವ ಸಂದರ್ಭದಲ್ಲಿ ಅಲ್ಲಿ ವಾಸಿಸಲು ಹಾಗೂ ಅಧ್ಯಯನ ನಡೆಸಲು ಸುರಕ್ಷಿತ ಪ್ರದೇಶದ ನಿರ್ಮಾಣ ಅಗತ್ಯ. ಕಾಂಕ್ರೀಟ್‌ನಿಂದ ಸದೃಢವಾದ ಹಾಗೂ ವಿಕಿರಣಗಳನ್ನು ತಡೆಯಬಲ್ಲ ಗೋಡೆ ನಿರ್ಮಾಣ ಸಾಧ್ಯ. ಕಾಂಕ್ರೀಟ್‌ ತಯಾರಿಸಲು ಮರಳು, ಕಲ್ಲು, ನೀರು ಹಾಗೂ ಸಿಮೆಂಟ್‌ ಬಳಸುತ್ತೇವೆ. ಬಾಹ್ಯಾಕಾಶದಲ್ಲಿ ಕಾಂಕ್ರೀಟ್‌ ತಯಾರಿಸುವ ಸಂದರ್ಭದಲ್ಲಿ ಆಗುವ ವ್ಯತ್ಯಾಸಗಳನ್ನು ಇನ್ನಷ್ಟೇ ಪರೀಕ್ಷಿಸಬೇಕಿದೆ’ ಎಂದು ನಾಸಾ ತಿಳಿಸಿದೆ.