ವೇದಮಂತ್ರ ಪಠಿಸಿದರೆ ಉತ್ತಮ ಇಳುವರಿ :ಗೋವಾ ಸರ್ಕಾರದಿಂದ ರೈತರಿಗೆ ಸಲಹೆ

0
311

ಕೃಷಿಯಲ್ಲಿ ಉತ್ತಮ ಇಳುವರಿ ಬೇಕೆ ? ಹಾಗಿದ್ದರೆ ಕೃಷಿಭೂಮಿಯಲ್ಲಿ ವೇದ ಮಂತ್ರಗಳನ್ನು ಪಠಿಸಿ ಎಂದು ಗೋವಾ ಸರ್ಕಾರವು ರಾಜ್ಯದ ರೈತರಿಗೆ ಸಲಹೆ ನೀಡಿದೆ.

ಪಣಜಿ (ಪಿಟಿಐ): ಕೃಷಿಯಲ್ಲಿ ಉತ್ತಮ ಇಳುವರಿ ಬೇಕೆ ? ಹಾಗಿದ್ದರೆ ಕೃಷಿಭೂಮಿಯಲ್ಲಿ ವೇದ ಮಂತ್ರಗಳನ್ನು ಪಠಿಸಿ ಎಂದು ಗೋವಾ ಸರ್ಕಾರವು ರಾಜ್ಯದ ರೈತರಿಗೆ ಸಲಹೆ ನೀಡಿದೆ.

ರೈತರು ತಮ್ಮ ಕೃಷಿಭೂಮಿಯಲ್ಲಿ ‘ಬ್ರಹ್ಮಾಂಡ ಕೃಷಿ’ (ಕಾಸ್ಮಿಕ್‌ ಫಾರ್ಮಿಂಗ್‌) ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ. ರೈತರು ತಮ್ಮ ಭೂಮಿಯಲ್ಲೇ ಕನಿಷ್ಠ 20 ದಿನಗಳಕಾಲ ವೇದಮಂತ್ರವನ್ನು ಪಠಿಸಿದರೆ, ಗುಣಮಟ್ಟದ ಬೆಳೆ ಹಾಗೂ ಗರಿಷ್ಠ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಧಾನದಲ್ಲಿ ಹೆಚ್ಚು ಅನುಭವ ಹೊಂದಿರುವ ಬ್ರಹ್ಮಕುಮಾರಿ ಹಾಗೂ ಶಿವಯೋಗ ಫೌಂಡೇಷನ್‌ ಜೊತೆಗೆ ಸರ್ಕಾರ ಮಾತುಕತೆ ನಡೆಸಿದೆ ಎಂದು ತಿಳಿಸಿದರು.

ಈ ವಿಧಾನವನ್ನು ಪ್ರಚುರಪಡಿಸುವ ‘ಶಿವಯೋಗ ಕೃಷಿ’ಯ ಬಗ್ಗೆ ಮಾಹಿತಿ ಪಡೆಯಲು ಗೋವಾ ಕೃಷಿ ಸಚಿವ ವಿಜಯ್‌ ಸರ್ದೇಸಾಯಿ, ಕೃಷಿ ಇಲಾಖೆ ನಿರ್ದೇಶಕ ನೆಲ್ಸನ್‌ ಫಿಗೈರೆಡೊ ಅವರು ಹರಿಯಾಣದ ಗುರುಗ್ರಾಮದಲ್ಲಿರುವ ಗುರುಶಿವಾನಂದ ಕೇಂದ್ರಕ್ಕೂಭೇಟಿ ನೀಡಿದ್ದರು’ ಎಂದು ವಿವರಿಸಿದರು.

‘ಸಾವಯವ ಹಾಗೂ ಪರಿಸರಸ್ನೇಹಿ ಮಾದರಿಗೆ ಒತ್ತುನೀಡಲು ಕೃಷಿ ಇಲಾಖೆ ನಿರ್ಧರಿಸಿದೆ. ಈ ಕಾರಣದಿಂದ ಬ್ರಹ್ಮಾಂಡ ಕೃಷಿ ಹಾಗೂ ಇದೇ ಮಾದರಿಯ ಕೃಷಿ ಮಾದರಿ ಅನುಸರಿಸುತ್ತಿರುವ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ, ಇದರಿಂದ ಗುಣಮಟ್ಟದ ಇಳುವರಿ ಏರಿಕೆಗೂ ಕಾರಣವಾಗಲಿದೆ’ ಎಂದು ನೆಲ್ಸನ್‌ ವರು ವಿವರಿಸಿದರು.

ಈ ವಿಧಾನದ ಪ್ರಕಾರ, ರೈತರು ತಮ್ಮ ಕೃಷಿಭೂಮಿಯಲ್ಲಿ 20 ದಿನಗಳ ಕಾಲ 20 ನಿಮಿಷ ವೇದಮಂತ್ರವನ್ನು ಪಠಿಸಬೇಕು. ಮಂತ್ರೋಚ್ಚಾರಣೆಯಿಂದ ಸೃಷ್ಟಿಯಾಗುವ ಶಕ್ತಿಯು, ಕೃಷಿಭೂಮಿಯಲ್ಲಿ ಉತ್ಪಾದನೆಯಾಗಿ, ಗುಣಮಟ್ಟದ ಇಳುವರಿಯನ್ನು ಪಡೆದುಕೊಳ್ಳಬಹುದು ಎಂದು ನೆಲ್ಸನ್‌ ಫಿಗೈರೆಡೊ ಅವರು ವಿವರಿಸಿದರು. ಈ ಪದ್ಧತಿ ಅಳವಡಿಕೆಯಿಂದ ರಾಸಾಯನಿಕ ಹಾಗೂ ಕ್ರಿಮಿನಾಶಕ ಬಳಸುವಂತಿಲ್ಲ, ಇದರಿಂದ ಸಂಪೂರ್ಣ ಸಾವಯವ ಆಹಾರ ದೊರೆಯಲಿದೆ ಎಂದರು.

‘ಈ ವಿಚಾರ ಜಾರಿ ಸಂಬಂಧ, ಗೋವಾ ಸುಸ್ಥಿರ ಕೃಷಿ ಯೋಜನೆಯ ಅಧಿಕಾರಿಗಳು ಬ್ರಹ್ಮಕುಮಾರಿ ಸಂಸ್ಥೆಯ ಗ್ರಾಮೀಣ ಅಭಿವೃದ್ಧಿ ವಿಭಾಗದ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ. ಸುಮಾರು 1 ಸಾವಿರಕ್ಕೂ ಹೆಚ್ಚಿನ ರೈತರು ಈ ವಿಧಾನವನ್ನು ಅಳವಡಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ಲಾಭ ಪಡೆದುಕೊಂಡಿದ್ದಾರೆ’ ಎಂದು ಬ್ರಹ್ಮಕುಮಾರಿ ಸಂಸ್ಥೆ ತಿಳಿಸಿದೆ ಎಂದು ಅವರು ತಿಳಿಸಿದರು.

‘ಬ್ರಹ್ಮಾಂಡ ಕೃಷಿ’ ಪದ್ಧತಿ ಅಳವಡಿಕೆಯಿಂದ ಖರ್ಚು ಕಡಿಮೆಯಾಗಿ, ಇಳುವರಿ ಹೆಚ್ಚಾಗಲಿದೆ. ಇದರಿಂದ ಪರಿಸರದ ಮೇಲಿನ ಒತ್ತಡವೂ ಕೊನೆಯಾಗಲಿದೆ

ನೆಲ್ಸನ್‌ ಫಿಗೈರೆಡೊ, ಗೋವಾ ಕೃಷಿ ಇಲಾಖೆ ನಿರ್ದೇಶಕ